Advertisement

ನೆನಪಿನ ಅಂಗಳದಲ್ಲಿ ಮಹಾತ್ಮಾ ರಂಗ ಪ್ರಸ್ತುತಿ

11:53 AM Jun 27, 2020 | mahesh |

“ಅನುಭವ ಕಲಿಸಿದಷ್ಟು ಪಾಠವನ್ನು ಯಾವ ವಿಶ್ವವಿದ್ಯಾಲಯವು ಕಲಿಸುವುದಿಲ್ಲ’ ಎಂಬ ಮಾತಿದೆ. ಅಂಕಗಳಿಕೆಯ ಚೌಕಟ್ಟಿಗೆ ನಮ್ಮನ್ನು ಸೀಮಿತಗೊಳಿಸುವ ತರಗತಿಯ ನಾಲ್ಕು ಗೋಡೆಯೊಳಗಿನ ಪುಸ್ತಕದ ಪಾಠಕ್ಕಿಂತ ಬದುಕಿನ ಪ್ರತೀ ಮಜಲನ್ನು ಎಳೆ ಎಳೆಯಾಗಿ ಪರಿಚಯಿಸುವ ಕಲೆ,ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವಿಕೆ ಕೂಡ ಅನುಭವಕ್ಕಿಂತ ಮಿಗಿಲು. ವಿದ್ಯಾರ್ಥಿ ಜೀವನದಲ್ಲಿ ಇಂಥಹ ನಿರ್ಣಾಯಕ ಹಂತಕ್ಕೆ ನನ್ನನ್ನು ಇದಿರುಗೊಳ್ಳುವಂತೆ ಮಾಡಿದ್ದು “ಮಹಾತ್ಮಾ’ ರಂಗ ಪ್ರಸ್ತುತಿ; ಅದರೊಳಗಿನ “ಗಾಂಧಿ’ ಪಾತ್ರಧಾರಿಯಾಗಿ ನಾನು.

Advertisement

2018-19ರ ಶೈಕ್ಷಣಿಕ ವರ್ಷ ಕಾಲೇಜಿನಲ್ಲಿ ಅಂತರ್‌ ಕಾಲೇಜು ಮಟ್ಟದ ನಾಟಕ ಸ್ಪರ್ಧೆಗೆ ತಯಾರಿ ನಡೆಯುತ್ತಿತ್ತು. ನಾನು ಮತ್ತು ನನ್ನ ಸ್ನೇಹಿತರು ನಾಟಕಕ್ಕೆ ಹೆಸರು ನೀಡಿ ಬಂದೆವು. ಅನಂತರ ನಾಟಕದ ಗುರುಗಳಾದ ವಾಸುದೇವ ಸರ್‌, ನಾಟಕದ ರಚನೆಗಾರರಾದ ಉದಯ ಗಾಂವಕರ್‌ ಸರ್‌ ಕಾಲೇಜಿಗೆ ಬಂದು ನಾಟಕದ ಹೆಸರು ತಿಳಿಸಲು ನಮ್ಮನ್ನು ಅಡಿಟೋರಿಯಂಗೆ ಕರೆದುಕೊಂಡು ಹೋದರು. ನಾಟಕ ಯಾವುದು ಎಂಬ ಕುತೂಹಲ ಹೆಚ್ಚಿತ್ತು. ಈ ಮಧ್ಯೆ “ಮಹಾತ್ಮಾ’ ನಾಟಕ ಎಂದು ಕೇಳಿದಾಗಲೇ ಇದು ಹೊಸ ಶೀರ್ಷಿಕೆ ಎನಿಸಿತು.

ಅನಂತರ ನಾಟಕದ ಕೆಲವೊಂದು ಗೀತೆಗಳನ್ನು ಹಾಡಿಸಿ, ಮಾರನೇ ದಿನ ಪಾತ್ರಧಾರಿಗಳ ಏಕಾಗ್ರತೆ, ಅಭಿನಯವನ್ನು ಹೆಚ್ಚಿಸಲು ಅನೇಕ ರೀತಿಯ ಚಟುವಟಿಕೆಗಳನ್ನು ಮಾಡಿಸಿದ್ದರು. 9 ವಿದ್ಯಾರ್ಥಿಗಳು ನಾಟಕದ ಅಭಿನಯಕ್ಕೆ ಸಿದ್ಧರಾಗಿ ಎಂದು ಹೇಳಿ ಹೋದರು.  ಮರುದಿನ ನಾಟಕದ ಪಾತ್ರಧಾರಿಗಳ ಆಯ್ಕೆಯಾಯಿತು ಜತೆಗೆ ತರಬೇತಿ ಶುರುವಾಯಿತು. ಬಹು ಖುಷಿಯ ಸಂಗತಿಯೆಂದರೆ ಆಯ್ಕೆಯಾದ 9 ನಾಟಕ ಪಾತ್ರಧಾರಿಗಳಲ್ಲಿ ನಾನು ಒಬ್ಬನಾಗಿದ್ದೆ. ಕಾಲೇಜಿನ ನಿರ್ದೇಶಕರಾದ ಪ್ರೊ| ದೋಮ ಚಂದ್ರಶೇಖರ್‌ ಸರ್‌ ಹಾಗೂ ಪ್ರಭಾರ ಪ್ರಾಂಶುಪಾಲರಾದ ಚೇತನ್‌ ಸರ್‌ ಅವರ ಪ್ರೋತ್ಸಾಹದೊಂದಿಗೆ ನಾಟಕ ಕಲಿಕೆ ಚುರುಕು ಕಂಡಿತು. ಈ ನಡುವೆ ಪರೀಕ್ಷೆ ಇದ್ದರೂ ಕೂಡ ನಾಟಕದ ಕಡೆ ಗಮನಹರಿಸುವಂತೆ ಉಪನ್ಯಾಸಕರು ತಿಳಿಸಿದ್ದರು.

ಜು. 29, 2018ರಂದು ಕೊನೆಯ ತರಬೇತಿ, “ನಾಳೆ ಸ್ಪರ್ಧೆಯಿದೆ’ ಎಂಬ ಸ್ಪರ್ಧೆಯ ಕುರಿತಾದ ಅಳುಕು ಒಂದೆಡೆ; “ನಾಳೆಯಿಂದ ನಾಟಕ ತರಬೇತಿಯಿಲ್ಲ’ ಎಂಬ ದುಗುಡ ಮತ್ತೂಂದೆಡೆ. ಈ ಎಲ್ಲ ಆಲೋಚನೆಗಳನ್ನು ಮೀರಿ ನಿಂತು ಅಭ್ಯಸಿಸುವಂತೆ, ರಾತ್ರಿ 7 ಗಂಟೆಯವರೆಗೂ ನಮ್ಮೊಡನಿದ್ದು ನಾಟಕ ಕಲಿಕೆಗೆ ಪ್ರೋತ್ಸಾಹಿಸಿದ್ದು ಇಂಗ್ಲಿಷ್‌ ಉಪನ್ಯಾಸಕರಾದ ಅಮೃತಾ ಮೇಡಂ. ಜುಲೈ 30, 2018 – ಪೂರ್ಣಪ್ರಜ್ಞ ಕಾಲೇಜು, ಉಡುಪಿಯಲ್ಲಿ ನಮ್ಮ ನಾಟಕದ ಮೊದಲ ಪ್ರದರ್ಶನ ಸ್ವಲ್ಪ ಭಯವಾಯಿತು. ಆದರೂ ನಾಟಕದ ಪರಿಕಲ್ಪನೆ ಅದರೊಳಗಿನ ಪಾತ್ರಗಳಿಗೆ ಜೀವ ತುಂಬುವ ಪ್ರಯತ್ನ ಮಾಡಿದೆವು. ನಾಟಕದ ಮುಗಿಯುವ ಹಂತದಲ್ಲಿ ನೆರದವರೆಲ್ಲ ಎದ್ದು ನಿಂತು ಕರತಾಡನಗೈದರು.

ನನ್ನೊಳಗೊಬ್ಬ ಗಾಂಧಿ ಮೂಡಿದ
“ಮಹಾತ್ಮಾ’ ರಂಗ ಪ್ರಸ್ತುತಿ ನಮ್ಮ ದೇಶ ಕಂಡ ಮಹಾನ್‌ ಚೇತನ ಮಹಾತ್ಮಾ ಗಾಂಧಿಯ ಕುರಿತಾದದ್ದು. ಗಾಂಧಿ ಪಾತ್ರಧಾರಿಯಾಗಿ ಗಾಂಧೀಜಿಯವರ ಬದುಕಿನ ಚಿಂತನೆಗಳನ್ನು ನಟನೆಯ ಮುಖೇನ ಮತ್ತೂಮ್ಮೆ ಜೀವಂತಗೊಳಿಸುವ ಬಹು ಕ್ಲಿಷ್ಟ ಜವಾಬ್ದಾರಿ ನನ್ನ ಹೆಗಲ ಮೇಲಿತ್ತು. ಗಾಂಧೀಜಿಯವರ ವ್ಯಕ್ತಿತ್ವ, ಅಹಿಂಸೆಯ ಭಾವ, ಪರಿಸರ ಹಾಗೂ ಸ್ವತ್ಛತೆಯ ಕುರಿತಾದ ಕಾಳಜಿ ಇಷ್ಟವಾಗಿದ್ದರೂ, ಅವರೆಡೆಗೆ ಮಿಶ್ರ ಅಭಿಪ್ರಾಯ ನನ್ನೊಳಗಿತ್ತು. ಎಂದು ಗಾಂಧಿ ಪಾತ್ರಧಾರಿಯಾದೆನೋ, ಎಂದು ಗಾಂಧಿಯ ತತ್ವ ಆದರ್ಶಗಳ ಕುರಿತು ಅರಿತೆನೋ ಅಂದಿನಿಂದಲೇ ಗಾಂಧಿಯ ಕುರಿತಾಗಿ ನನ್ನೊಳಗೆ ಬೇರೂರಿದ್ದ ನಕಾರಾತ್ಮಕ ನಿಲುವುಗಳು ಸತ್ತವು. ಮುಂದೆ ಕಾಲೇಜಿನ ಶಿಕ್ಷಕರು, ನನ್ನ ಗೆಳೆಯರೆಲ್ಲಾ “ಗಾಂಧಿ’ ಎಂದು ನನ್ನನ್ನು ಕರೆಯಲಾರಂಭಿಸಿದಾಗ ವ್ಯಕ್ತಪಡಿಸಲಾಗದ, ಪದಗಳಿಗೆಟುಕದ ಸಿಹಿ ಅನುಭವ ನನ್ನೊಳಗಾಗುತ್ತಿತ್ತು; ಇಂದಿಗೂ ಆಗುತ್ತಿದೆ. ಮುಂದೆ ನಮ್ಮ “ಮಹಾತ್ಮಾ’ ರಂಗ ಪ್ರಸ್ತುತಿ’ ನಾಟಕವು ಜೇಸಿಐ ಕುಂದಾಪುರ, ಸಂವೇದನಾ ಕಾಲೇಜು, ಕಂಬದಕೋಣೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಸೋಡಿನಲ್ಲಿ ನಡೆದ ಎನೆಸ್ಸೆಸ್‌ ಕ್ಯಾಂಪ್‌ ನಲ್ಲಿ, ಗಾಂಧಿ ಜಯಂತಿ ಯಂದು ಕಾಲೇಜಿನಲ್ಲಿ ಒಟ್ಟು 5 ಬಾರಿ ಪ್ರದರ್ಶನ ಕಂಡಿತು. ಜತೆಗೆ ಪ್ರತೀ ಪ್ರದರ್ಶನದಲ್ಲೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಯಶಸ್ಸಿಗೆ ಉಪನ್ಯಾಸಕರಾದ ರೇಷ್ಮಾ , ಪ್ರವೀಣ್‌ , ಶಿವರಾಜ್‌, ಅರ್ಚನಾ, ರಕ್ಷಿತಾ ಅವರ ಸಹಕಾರವೇ ಕಾರಣವಾಗಿತ್ತು.

Advertisement

ಅಭಿಷೇಕ್‌ ಬಡಾಮನೆ
ಉಪ್ಪುಂದ, ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next