ನವದೆಹಲಿ:ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲ್ ಕೃಷ್ಣ ಗಾಂಧಿಯನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವಂತೆ ಎಡಪಕ್ಷಗಳು ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ತನ್ನದೇ ದಾಖಲೆಯನ್ನು ಅಳಿಸಿ ಹಾಕಿದ ಚಿನ್ನದ ಹುಡುಗ ನೀರಜ್ ಚೋಪ್ರಾ
ರಾಷ್ಟ್ರಪತಿ ಅಭ್ಯರ್ಥಿಯಾಗುವ ಬಗ್ಗೆ ತನಗೆ ಸ್ವಲ್ಪ ಕಾಲಾವಕಾಶ ನೀಡಬೇಕೆಂದು ಗೋಪಾಲ್ ಕೃಷ್ಣ ಗಾಂಧಿ ಮನವಿ ಮಾಡಿಕೊಂಡಿರುವುದಾಗಿ ವರದಿ ಹೇಳಿದೆ. ಮೂಲಗಳ ಪ್ರಕಾರ, ಮಂಗಳವಾರ ಎಡಪಕ್ಷಗಳು ಶರತ್ ಪವಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದ ವೇಳೆ ಪಶ್ಚಿಮಬಂಗಾಳದ ಮಾಜಿ ರಾಜ್ಯಪಾಲ ಗೋಪಾಲ್ ಕೃಷ್ಣ ಗಾಂಧಿ ಹೆಸರನ್ನು ಪ್ರಸ್ತಾಪಿಸಿತ್ತು ಎಂದು ವರದಿ ವಿವರಿಸಿದೆ.
ಒಂದು ವೇಳೆ ನನ್ನನ್ನು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಎಂದು ಪರಿಗಣಿಸಿದಲ್ಲಿ, ನನಗೆ ಈ ಕುರಿತು ಆಲೋಚಿಸಲು ಕಾಲಾವಕಾಶದ ಅಗತ್ಯವಿದೆ ಎಂದು ಗಾಂಧಿ ಇಂಡಿಯಾ ಟುಡೇ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
2017ರಲ್ಲಿ ಗೋಪಾಲ್ ಕೃಷ್ಣ ಗಾಂಧಿ ಅವರನ್ನು ಉಪ ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದವು. ಆದರೆ ಚುನಾವಣೆಯಲ್ಲಿ ಎಂ.ವೆಂಕಯ್ಯ ನಾಯ್ಡು ಎದುರು ಗೋಪಾಲ್ ಕೃಷ್ಣ ಗಾಂಧಿ ಪರಾಜಯಗೊಂಡಿದ್ದರು.
77 ವರ್ಷದ ಗೋಪಾಲ್ ಕೃಷ್ಣ ಗಾಂಧಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಮಹಾತ್ಮಗಾಂಧಿ ಮತ್ತು ಸಿ.ರಾಜ್ ಗೋಪಾಲಾಚಾರಿ ಅವರ ಮೊಮ್ಮಗ.
ರಾಷ್ಟ್ರಪತಿ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪಶ್ಚಿಮಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವಿಧ ವಿರೋಧ ಪಕ್ಷಗಳ ಜೊತೆ ಸಭೆ ನಡೆಸಿದ್ದು, ಕೆಲವು ಮುಖಂಡರು ಎನ್ ಸಿಪಿ ವರಿಷ್ಠ ಶರದ್ ಪವಾರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಆದರೆ ಪವಾರ್ ರಾಷ್ಟ್ರಪತಿ ಅಭ್ಯರ್ಥಿಯಾಗಲು ಒಲವು ಇಲ್ಲ ಎಂಬುದಾಗಿ ತಿಳಿಸಿದ್ದರು.