ಪಣಜಿ: ಪಾಕಿಸ್ಥಾನದ ಪ್ರಥಮ ಪ್ರಧಾನಿ ಮಹಮ್ಮದ್ ಅಲಿ ಜಿನ್ನಾರನ್ನು ಭಾರತದ ಪ್ರಧಾನಿಯನ್ನಾಗಿಸಲು ಮಹಾತ್ಮ ಗಾಂಧಿ ಮನಸು ಮಾಡಿದ್ದರು. ಆದರೆ ಜವಾಹರಲಾಲ ನೆಹರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಟಿಬೆಟ್ ಧರ್ಮಗುರು ದಲಾಯಿ ಲಾಮಾ ಹೇಳಿದ್ದಾರೆ. ಗೋವಾದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನೆಹರು ತನ್ನ ಪರವಾಗಿ ಮಾತ್ರ ಯೋಚನೆ ಮಾಡುತ್ತಿದ್ದರು. ತಾವೇ ಪ್ರಧಾನಿಯಾಗುವ ಆಸಕ್ತಿ ಹೊಂದಿದ್ದರು. ಒಂದು ವೇಳೆ ಜಿನ್ನಾ ಪ್ರಧಾನಿಯಾಗಿದ್ದರೆ ಇಂದು ಭಾರತ ಹಾಗೂ ಪಾಕಿಸ್ಥಾನ ಒಂದೇ ಆಗಿರುತ್ತಿತ್ತು ಎಂದು ದಲಾಯಿ ಲಾಮಾ ಹೇಳಿದ್ದಾರೆ. ದೇಶ ವಿಭಜನೆಯ ಮಾತುಗಳು ಕೇಳಿ ಬಂದಾಗ ಮಹಾತ್ಮ ಗಾಂಧಿ ಬೇಸರ ಮಾಡಿಕೊಂಡು ಕೋಲ್ಕತ್ತಾಗೆ ತೆರಳಿದ್ದರು. ದೇಶ ವಿಭಜನೆಯ ವೇಳೆ ಗಾಂಧಿ ಕೋಲ್ಕತಾದಲ್ಲಿದ್ದರು. ನೆಹರು ಅನುಭವಿ. ಆದರೆ ಅವರಿಂದ ತಪ್ಪು ನಡೆದುಹೋಗುತ್ತಿತ್ತು ಎಂದೂ ಹೇಳಿದ್ದಾರೆ.