Advertisement

ಮಹಾದೇವತಾತ ರಥೋತ್ಸವ

07:41 AM Jan 18, 2019 | Team Udayavani |

ಬಳ್ಳಾರಿ: ಇಲ್ಲಿನ ಹೊರವಲಯದ ವಿನಾಯಕನಗರದಲ್ಲಿನ ಅಲ್ಲೀಪುರ ಮಹಾದೇವತಾತನವರ ಪುಣ್ಯಾರಾಧನೆ ನಿಮಿತ್ತ ಮಹಾರಥೋತ್ಸವವು ಸಾವಿರಾರು ಭಕ್ತರ ನಡುವೆ ಅತ್ಯಂತ ಅದ್ಧೂರಿಯಾಗಿ ಗುರುವಾರ ಜರುಗಿತು.

Advertisement

ಜಿಲ್ಲೆ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತೆಲಂಗಾಣದಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಹೂವು, ಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ತಾತನವರ ಮಠದ ಪ್ರವೇಶ ದ್ವಾರದಿಂದ ಅಲ್ಲೀಪುರ ಗ್ರಾಮದ ಮುಖ್ಯಬೀದಿಯಲ್ಲಿ ಮಹಾರಥೋತ್ಸವ ಜರುಗಿತು. ಪುಣ್ಯಾರಾಧನೆ ನಿಮಿತ್ತ ಬೆಳಗ್ಗೆ ಮಹಾದೇವ ತಾತನವರ ಶಿಲಾಮೂರ್ತಿಗೆ ವಿಶೇಷವಾಗಿ ಹಾಲಿನ ಅಭಿಷೇಕ ನೆರವೇರಿಸಲಾಯಿತು. ಗಂಗೆಪೂಜೆ, ಮಡಿತೇರು ಎಳೆಯುವುದು ಸೇರಿದಂತೆ ವಿವಿಧ ಧಾರ್ಮಿಕ ಕೆಲಸಗಳು ನಡೆದವು. ರಥೋತ್ಸವ ಅಂಗವಾಗಿ ಮಠದಲ್ಲಿ ಆಯೋಜಿಸಿದ್ದ ಶಿವಶರಣೆ ಗುಡ್ಡಾಪುರದ ದಾನಮ್ಮದೇವಿಯ ಪುರಾಣ ಮಹಾಮಂಗಲಗೊಂಡಿತು. ಬೆಳಗ್ಗೆಯಿಂದ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿ ತಾತನ ಗದ್ದುಗೆ ದರ್ಶನ ಪಡೆದರಲ್ಲದೆ, ಹೂವು, ಹಣ್ಣು, ಕಾಯಿ ಅರ್ಪಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವ ನಿಮಿತ್ತ ಮಠವನ್ನು ಹೂವುಗಳಿಂದ ಅಲಂಕೃತಗೊಳಿಸಲಾಗಿತ್ತು.

ವಿವಿಧ ವಸ್ತ್ರ ಹಾಗೂ ಪುಷ್ಪಗಳಿಂದ ಅಲಂಕೃತಗೊಂಡಿದ್ದ ತಾತನವರ ಮಹಾರಥೋತ್ಸವಕ್ಕೆ ಸಂಜೆ ಸರಿಯಾಗಿ 4 ಗಂಟೆಗೆ ಚಾಲನೆ ದೊರೆಯಿತು. ಮಹಾದೇವತಾತನವರ ಜಯಘೋಷದೊಂದಿಗೆ ರಥೋತ್ಸವವು ರಥಬೀದಿಯಲ್ಲಿ ಸಾಂಗವಾಗಿ ಸಾಗಿತು. ರಥೋತ್ಸವ ಅಂಗವಾಗಿ ವಿನಾಯಕನಗರ ಭಕ್ತರಿಂದ ಗುರುವಾರ ರಾತ್ರಿ ರೇಣುಕಾ ಯಲ್ಲಮ್ಮ ಬಯಲಾಟ ಪ್ರದರ್ಶನ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next