Advertisement

ಗುರಿ ಮೀರಿ ಸಾಧನೆ; ಮಂಗಳೂರು ತಾ|ಜಿಲ್ಲೆಗೆ ಪ್ರಥಮ

12:19 AM May 02, 2019 | Team Udayavani |

ಬಜಪೆ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ 2018-19ನೇ ಸಾಲಿನಲ್ಲಿ ಮಂಗಳೂರು ತಾಲೂಕು ನಿಗದಿಪಡಿಸಿದ ಅರ್ಥಿಕ ಮತ್ತು ಭೌತಿಕ ಗುರಿಯನ್ನು ಮೀರಿದ ಸಾಧನೆ ದಾಖಲಿಸಿ ದಕ್ಷಿಣ ಕನ್ನಡ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿದೆ. ಆರ್ಥಿಕವಾಗಿ ಶೇ.124 ಮತ್ತು ಭೌತಿಕವಾಗಿ ಶೇ. 112ರ ಸಾಧನೆ ಸಾಧಿಸಿದೆ.

Advertisement

ಪುತ್ತೂರು ತಾಲೂಕು ಅನುಕ್ರಮವಾಗಿ ಶೇ.97, ಶೇ.99, ಸುಳ್ಯ ಶೇ.95, 91, ಬೆಳ್ತಂಗಡಿ ಶೇ.100, ಶೇ. 89, ಬಂಟ್ವಾಳ ಶೇ.81, ಶೇ.88 ಸಾಧನೆ ಮಾಡಿ ಅನಂತರದ ಸ್ಥಾನಗಳಲ್ಲಿವೆ. ಜಿಲ್ಲೆಯಲ್ಲಿ ಒಟ್ಟು ಅರ್ಥಿಕವಾಗಿ ಶೇ.101 ಮತ್ತು ಭೌತಿಕವಾಗಿ ಶೇ.94 ಸಾಧನೆಯಾಗಿದೆ.

2018-19ನೇ ಸಾಲಿನಲ್ಲಿ ಉದ್ಯೋಗ ಚೀಟಿಯ ಅಧಾರದ ಮೇಲೆ ಕಾರ್ಮಿಕ ಆಯವ್ಯಯ ಅನುಗುಣವಾಗಿ ಗುರಿಯನ್ನು ನಿರ್ಧರಿಸಲಾಗಿತ್ತು. ಮಂಗಳೂರು ತಾಲೂಕಿಗೆ 2,05,052 ಮಾನವ ದಿನಗಳಲ್ಲಿ 9,02,02,000 ರೂ. ಆರ್ಥಿಕ ಗುರಿ ನಿಗದಿಯಾಗಿತ್ತು. ಆದರೆ ತಾಲೂಕು 2,30,066 ಭೌತಿಕ ಮಾನವ ದಿನಗಳಲ್ಲಿ 11,15,81,000 ರೂ.ಗಳ ಆರ್ಥಿಕ ಸಾಧನೆ ಮಾಡಿದೆ. ಯೋಜನೆಯಡಿ ತಾಲೂಕಿನಲ್ಲಿ 2,30,066 ದಿನ ಉದ್ಯೋಗ ನೀಡಿದೆ.

ಒಟ್ಟು 14,50,000 ಮಾನವ ದಿನಗಳಲ್ಲಿ 63,78,55,000 ರೂ. ಆರ್ಥಿಕ ಗುರಿ ನಿಗದಿಗೊಳಿಸಲಾಗಿತ್ತು. 13,62,007 ಮಾನವ ದಿನಗಳಲ್ಲಿ 64,55,26,000 ರೂ. ಸಾಧನೆ ಆಗಿದೆ.

ತಾಲೂಕಿನಲ್ಲಿ ಕಿನ್ನಿಗೋಳಿ ಪ್ರಥಮ ಮಂಗಳೂರು ತಾಲೂಕಿನಲ್ಲಿ ಯೋಜನೆಯಡಿ ಕಿನ್ನಿಗೋಳಿ ಗ್ರಾ.ಪಂ. ಅತೀ ಹೆಚ್ಚು ಅಂದರೆ, ಒಟ್ಟು 69,79,000 ರೂ. ಮೊತ್ತದ ಕಾಮಗಾರಿ ನಡೆಸಿದೆ.

Advertisement

ಅತೀ ಕಡಿಮೆ ಮೊತ್ತದ ಕಾಮಗಾರಿ
ಗ್ರಾಮೀಣ ಪ್ರದೇಶದ ಗ್ರಾ.ಪಂ.ಗಳಾದ ಬಳುRಂಜೆ 3,35,000 ರೂ., ಮಲ್ಲೂರು ಮತ್ತು ಮುಚ್ಚಾರು ತಲಾ 4,10,000 ರೂ. ವೆಚ್ಚದ ಕಾಮಗಾರಿ ಮಾಡಿದ್ದು, ಅತೀ ಕಡಿಮೆ ಸಾಧನೆ ದಾಖಲಿಸಿವೆ.

ಡಾಟ್‌ ಎಂಟ್ರಿ ಆಪರೇಟರ್‌ ಪಾತ್ರ ಮುಖ್ಯ
ಗ್ರಾ.ಪಂ.ಗಳ ಪಿಡಿಒ ಮತ್ತು ಡಾಟ್‌ ಎಂಟ್ರಿ ಅಪರೇಟರ್‌ಗಳ ಮುತುವರ್ಜಿ ಈ ಯೋಜನೆಯ ಯಶಸ್ಸಿನಲ್ಲಿ ಮುಖ್ಯವಾಗಿದೆ. ಇವರಿಂದ ಸಮರ್ಪಕವಾಗಿ ಉದ್ಯೋಗ ಚೀಟಿ ನೋಂದಣಿ, ನವೀಕರಣ, ಕ್ರಿಯಾಯೋಜನೆ ತಯಾರಿ, ಕಾಮಗಾರಿಗಳ ಅನುಷ್ಠಾನ, ದಾಖಲೀಕರಣ ಇಲ್ಲಿ ಅಗತ್ಯ.

ಕಡಿಮೆ ಸಾಧನೆಗೆ ಕಾರಣ
ಬಾವಿ ರಚನೆ, ಸಾರ್ವಜನಿಕ ಕೆರೆ -ನಾಲೆಗಳ ಹೂಳೆತ್ತುವುದು ಕಡಿಮೆಯಾಗಿದೆ. ಕೃಷಿ, ತೋಟಗಾರಿಕೆ ಇಲಾಖೆ- ಸಾಮಾಜಿಕ ಅರಣ್ಯ ಕಾಮಗಾರಿ ಈ ಬಾರಿ ಕಡಿಮೆಯಾಗಿವೆ. ಜತೆಗೆ, ಖಾಸಗಿ ಬಾವಿ, ಕೆರೆ ದುರಸ್ತಿಗೆ ಅವಕಾಶ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಸಿಗುವುದಿಲ್ಲ, ಕೂಲಿ ಕಡಿಮೆ ಎಂಬ ಭಾವನೆ ಮತ್ತು ಹಣ ಸರಿಯಾಗಿ ಪಾವತಿಯಾಗುವುದಿಲ್ಲ ಎಂಬ ಹೆದರಿಕೆ ಇದೆ.

ಮಂಗಳೂರು ತಾಲೂಕು ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಗುರಿ ಮೀರಿದ ಸಾಧನೆ ಮಾಡಿದೆ. ತಾಲೂಕಿನಲ್ಲಿ ಶೇ.60ರಷ್ಟು ನಗರ ಪ್ರದೇಶಗಳು ಬಂದರೂ ಈ ಸಾಧನೆ ಆಗಿದೆ. ಗ್ರಾಮೀಣ ಪ್ರದೇಶವನ್ನು ಹೆಚ್ಚು ಹೊಂದಿರುವ ಗ್ರಾ.ಪಂ.ಗಳಿಗೆ ಈ ಯೋಜನೆಯಲ್ಲಿ ವಿಪುಲ ಅವಕಾಶ ಇದೆ.
–  ಸದಾನಂದ ಎಸ್‌.,
ನರೇಗಾ ಯೋಜನೆಯ ಸಹಾಯಕ ನಿರ್ದೇಶಕ

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next