Advertisement

ಮಹಾತ್ಮ ಗಾಂಧಿ ರಾಷ್ಟ್ರೀಯ ಭಾವೈಕ್ಯತೆ ಸಂಕೇತ

09:03 PM Feb 25, 2020 | Lakshmi GovindaRaj |

ಮೈಸೂರು: ಇಂದಿನ ಯಂತ್ರಯುಗದ ಭರಾಟೆಯಲ್ಲಿ ಬಸವಳಿದು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಮಾನವನ ಮನಸ್ಸುಗಳನ್ನು ಪುನಶ್ಚೇತನಗೊಳಿಸಿ ಸನ್ಮಾರ್ಗದಲ್ಲಿ ಕೊಂಡೊಯ್ಯುವಲ್ಲಿ ಗಾಂಧೀಜಿ ಚಿಂತನೆಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌ ಅಭಿಪ್ರಾಯಪಟ್ಟರು.

Advertisement

ಮೈಸೂರು ವಿಶ್ವವಿದ್ಯಾಲಯ ಗಾಂಧಿ ಅಧ್ಯಯನ ಕೇಂದ್ರ, ಗಾಂಧಿ ಭವನ ಮತ್ತು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠ ಕಾಲೇಜ್‌ ಆಫ್ ಎಜುಕೇಷನ್‌ ಸಹಯೋಗದಲ್ಲಿ ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ, “ದಕ್ಷಿಣ ಭಾರತದ ಮೇಲೆ ಗಾಂಧೀಜಿ ಪ್ರಭಾವ’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಗಾಂಧಿ ಚಿಂತನೆ ಅವಶ್ಯ: ಮಹಾತ್ಮ ಗಾಂಧೀಜಿ ದೇಶದ ಉದ್ದಗಲಕ್ಕೂ ಅಂತ್ಯೋದಯ, ಸರ್ವೋದಯದ ಮೂಲಕ ಜನರ ಕಲ್ಯಾಣಕ್ಕಾಗಿ ಹೋರಾಡಿ, ನಮ್ಮ ರಾಷ್ಟ್ರೀಯ ಭಾವೈಕ್ಯತೆ ಸಂಕೇತವಾಗಿದ್ದರು. ಅವರು ಕೇವಲ ರಾಷ್ಟ್ರನಿರ್ಮಾಪಕರಾಗಿರಲಿಲ್ಲ. ಶತಮಾನಗಳ ಇತಿಹಾಸವುಳ್ಳ ನಮ್ಮ ದೇಶಕ್ಕೆ ಹೊಸ ಆಯಾಮ ನೀಡಿದ ಕೀರ್ತಿ ಗಾಂಧೀಜಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳು ಗಾಂಧಿ ಚಿಂತನೆ ಅರ್ಥ ಮಾಡಿಕೊಂಡರೆ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ವಿಚಾರ ಧಾರೆ ಅವಶ್ಯ: ಗಾಂಧೀಜಿ ಅವರ ನೇರ ನುಡಿ, ನಡೆ, ಸಜ್ಜನಿಕೆ, ಸರಳತೆ, ಖಚಿತತೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿತ್ತು. ಅವರನ್ನು ಒಂದು ದಿನದ ಕಾರ್ಯಾಗಾರದಲ್ಲಿ ತಿಳಿಯುವುದು ಕಷ್ಟ, ವರ್ಷವಿಡೀ ಅವರ ವಿಚಾರಧಾರೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಹೆಚ್ಚು ಪ್ರಸ್ತುತ: ಗಾಂಧಿ ವಿಚಾರಧಾರೆಗಳು ಒಂದು ಪಂಥಕ್ಕೆ, ಒಂದು ಧರ್ಮಕ್ಕೆ ಸೀಮಿತವಾಗಿರಲಿಲ್ಲ, ಅವರ ವಿಚಾರಧಾರೆಗಳಿಂದ ಪ್ರಪಂಚದ ಎಲ್ಲಾ ದೇಶಗಳಿಗೂ ಪ್ರಿಯರಾಗಿದ್ದರು. ಬದುಕಿನ ಪ್ರಯಾಣದಲ್ಲಿ ನಡೆಸಿದ ಗಾಂಧೀಜಿ ವಿಚಾರಧಾರೆ ಹಿಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ ಎಂದು ತಿಳಿಸಿದರು.

Advertisement

ಗಾಂಧಿ ಸಂಚಲನ: ಕುಲಸಚಿವ ಪ್ರೊ.ಆರ್‌.ಶಿವಪ್ಪ, ಗಾಂಧೀಜಿ ಭಾರತದ ಎಲ್ಲಾ ಮೂಲೆಗಳನ್ನು ಸುತ್ತಿ, ತಮ್ಮ ವಿಚಾರಧಾರೆಗಳಿಂದ ಅಲ್ಲಿನ ವಾಸ್ತವತೆ ಬದಲಾಯಿಸುವ ಪ್ರಯತ್ನ ನಡೆಸಿದವರು. ಹಾಗೆಯೇ ದಕ್ಷಿಣ ಭಾರತಕ್ಕೆ ಗಾಂಧೀಜಿ ಬಂದ ಮೇಲೆ, ಇಲ್ಲಿಯೂ ಅಪಾರ ಬೆಳವಣಿಗೆ ಕಂಡವು. ಇಲ್ಲಿನ ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ ರಾಜ್ಯಗಳಲ್ಲಿ ಗಾಂಧಿ ಸಂಚರಿಸಿ, ತಮ್ಮದೇ ಆದ ಸಂಚಲನ ಸೃಷ್ಟಿಸಿದ್ದರು ಎಂದು ತಿಳಿಸಿದರು.

ಬಿ.ಇಡಿ ವಿದ್ಯಾರ್ಥಿಗಳಿಗಾಗಿ ಮಾಡಿರುವ ಈ ಒಂದು ವಿಚಾರ ಸಂಕಿರಣ ತುಂಬಾ ಅರ್ಥಪೂರ್ಣವಾಗಿದೆ. ಇವರೆಲ್ಲಾ ಮುಂದೆ ಶಿಕ್ಷಕರಾಗಿ ಮಕ್ಕಳಿಗೆ ಪಾಠ ಹೇಳಿಕೊಡುವವರು. ಹೀಗಾಗಿ ದೇಶದ ಮಹಾನ್‌ ವ್ಯಕ್ತಿಗಳ ಬಗ್ಗೆ ಅಧ್ಯಯನ ಅನಿವಾರ್ಯವೆಂದರು.

ಜ್ಞಾನವಂತರಾಗಿ: ಶಿಕ್ಷಕರು ಹೇಳಿಕೊಟ್ಟಂತೆ ಮಕ್ಕಳು ರೂಪುಗೊಳ್ಳುತ್ತಾರೆ. ಹೀಗಾಗಿ ಮೊದಲು ನೀವು ಎಲ್ಲವನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಉತ್ತಮ ಎಂದು ಬಿ.ಇಡಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿಚಾರ ಗೋಷ್ಠಿ: ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್‌.ಎಸ್‌.ರಂಗರಾಜು ಕರ್ನಾಟಕದಲ್ಲಿ ಗಾಂಧೀಜಿ ಪ್ರಭಾವ ಕುರಿತು, ಚೆನ್ನೈ ವಿವಿ ಸಹ ಪ್ರಾಧ್ಯಾಪಕ ಡಾ.ಎಂ.ರಂಗಸ್ವಾಮಿ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಗಾಂಧೀಜಿ ಪ್ರಭಾವ ಕುರಿತು, ಹೈದ್ರಾಬಾದ್‌ ಓಸ್ಮಾನಿಯಾ ವಿವಿ ಪ್ರಾಧ್ಯಾಪಕ ಡಾ.ಲಿಂಗಣ್ಣ ಗೋನಾಳ್‌ ತೆಲಂಗಾಣದಲ್ಲಿ ಗಾಂಧೀಜಿ ಪ್ರಭಾವ ಕುರಿತು, ಆಂಧ್ರಪ್ರದೇಶದ ದ್ರಾವಿಡ ವಿವಿ ಪ್ರಾಧ್ಯಾಪಕಿ ಡಾ.ಎನ್‌.ಸುಶೀಲ ಆಂಧ್ರದಲ್ಲಿ ಗಾಂಧೀಜಿ ಪ್ರಭಾವ ಕುರಿತು ಹಾಗೂ ಕೇರಳದ ಕಾಸರಗೂಡಿನ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಕೇರಳದಲ್ಲಿ ಗಾಂಧೀಜಿ ಪ್ರಭಾವ ಕುರಿತು ವಿಚಾರ ಗೋಷ್ಠಿ ಮಂಡಿಸಿದರು.

ಗಾಂಧಿ ಮಾರ್ಗಿಗಳಾದ ಸರೋಜಮ್ಮ ತುಳಸಿದಾಸಪ್ಪ, ಕಾಗಿನೆಲೆ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಪುಟ್ಟಬಸವೇಗೌಡ, ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್‌.ಶೇಖರ್‌, ಕಾಗಿನೆಲೆ ಕನಕಗುರು ಪೀಠ ಬಿ.ಇಡಿ ಕಾಲೇಜಿನ ಪ್ರಾಂಶುಪಾಲೆ ಡಾ.ವಿಶಾಲಾಕ್ಷಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next