Advertisement

ಅರ್ಧಕ್ಕಿಳಿದ ಧ್ವಜ, ಅರ್ಧಕ್ಕೆ ನಿಂತ ಕವನ

12:13 AM Jan 30, 2022 | Team Udayavani |

ಮಹಾತ್ಮಾ ಗಾಂಧೀಜಿಯವರು ಎಂದಿನಂತೆ ದಿಲ್ಲಿಯ ಬಿರ್ಲಾ ಹೌಸ್‌ಗೆ 1948ರ ಜನವರಿ 30ರ ಸಂಜೆ ನಿತ್ಯದ ಪ್ರಾರ್ಥನೆಗೆ ಬರುವಾಗ 5.17 ವೇಳೆಗೆ ಹತ್ಯೆ ನಡೆಯಿತು. ಸುಮಾರು 6.30ರ ವೇಳೆ ರೇಡಿಯೋದಲ್ಲಿ ಸುದ್ದಿ ಪ್ರಸಾರವಾಯಿತು. ಅಮೆರಿಕದಲ್ಲಿರುವ ವಿಶ್ವಸಂಸ್ಥೆಯ ಕಚೇರಿಯಲ್ಲಿ ವಿಶ್ವಸಂಸ್ಥೆಯ ಧ್ವಜವನ್ನು ಅರ್ಧಕ್ಕೆ ಇಳಿಸಿ ಹಾರಿಸಲಾಯಿತು. ವಿಶ್ವಸಂಸ್ಥೆಯಲ್ಲಿ ಆಗ ಇದ್ದ ಎಲ್ಲ 57 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಎದ್ದು ನಿಂತು ಮೌನ ಪ್ರಾರ್ಥನೆ ನಡೆಸಿದರು. ವಿಶ್ವ ಸಂಸ್ಥೆಯ ಧ್ವಜವನ್ನು ಅರ್ಧಕ್ಕೆ ಹಾರಿಸುವುದೆಂದರೆ ವಿಶ್ವವೇ ಗೌರವಿಸಿದಂತೆ. ಅಧಿಕಾರದಲ್ಲಿದ್ದ ವ್ಯಕ್ತಿಗಳಿಗೆ ಇಂತಹ ಗೌರವ ಸಿಕ್ಕಿದೆ. ಯಾವುದೇ ಅಧಿಕಾರ ದಲ್ಲಿರದ ವ್ಯಕ್ತಿಯೊಬ್ಬರು ಅಸುನೀಗಿದಾಗ ವಿಶ್ವ ಸಂಸ್ಥೆಯ ಧ್ವಜವನ್ನು ಅರ್ಧಕ್ಕೆ ಹಾರಿಸಿದ್ದು ಮತ್ತು ಸದಸ್ಯ ರಾಷ್ಟ್ರಗಳು ಸರ್ವಸಮ್ಮತ ಸಂತಾಪಸೂಚಕ ನಿರ್ಣಯವನ್ನು ತಳೆದದ್ದು ಇದುವೇ ಮೊದಲು ಮತ್ತು ಕೊನೆ.

Advertisement

ಅಹಿಂಸೆಯನ್ನು ಪ್ರಧಾನ ಅಸ್ತ್ರವಾಗಿ ಬಳಸಿ ದೇಶಕ್ಕೆ ಸ್ವಾತಂತ್ರ್ಯ ತಂದಿತ್ತ ಗಾಂಧೀಜಿಯವರ ಜನ್ಮದಿನ ವನ್ನು (ಅ. 2) ಅಂತಾರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸಲು ವಿಶ್ವಸಂಸ್ಥೆಯ ಮಹಾಸಭೆ 192 ಸದಸ್ಯರಾಷ್ಟ್ರಗಳ ಒಪ್ಪಿಗೆಯೊಂದಿಗೆ 2007ರಲ್ಲಿ ನಿರ್ಣಯ ತಳೆಯಿತು. ಭಾರತದಲ್ಲಿ ಜ. 30ನ್ನು ಸರ್ವೋದಯ ದಿನ ಮತ್ತು ಹುತಾತ್ಮರ ದಿನವಾಗಿ ಆಚರಿಸಲಾಗುತ್ತಿದೆ.

ಗಾಂಧೀ ಸ್ಮರಣಾರ್ಥ ಶೋಕಾಚರಣೆ ಜ. 30ರ ರಾತ್ರಿಯಿಂದಲೇ ಆರಂಭವಾಯಿತು. ವಿವಿಧೆಡೆ ಗಳಲ್ಲಿ 13 ದಿನಗಳ ಭಜನೆಗೆ ಸಂಕಲ್ಪಿಸಿ ನಡೆಸ ಲಾಯಿತು. ಗಾಂಧೀಜಿಯವರು ಹೋಗದ ಊರಿಲ್ಲ, ಹೋಗದ ರಾಜ್ಯಗಳಿಲ್ಲ. ಹೀಗಾಗಿ ಮೂರು ದಿನ ಕಳೆದು ದಿಲ್ಲಿಯಿಂದ ಹೊರ ರಾಜ್ಯಗಳಿಗೆ ಚಿತಾಭಸ್ಮವನ್ನು ಕಳುಹಿಸಿಕೊಡಲಾ ಯಿತು. ಎಲ್ಲ ಕಡೆ ಸಾರ್ವಜನಿಕರು ಚಿತಾಭಸ್ಮದ ದರ್ಶನ ಪಡೆದು ನದಿ, ಸಮುದ್ರ ಕಿನಾರೆಗಳಲ್ಲಿ ವಿಸರ್ಜಿಸಿದರು. ಫೆ. 11ರ ರಾತ್ರಿ ಮಂಗಳೂರಿಗೆ ರೈಲಿನಲ್ಲಿ ಚಿತಾಭಸ್ಮ ಬಂದಾಗ ಭಕ್ತಿ ಭಾವದಿಂದ ಸ್ವಾಗತಿಸಲಾಯಿತು. ಅಲ್ಲಿಂದ ಉಡುಪಿಗೂ ಚಿತಾಭಸ್ಮ ಬಂತು. ಮಂಗಳೂರಿನಲ್ಲಿ ಹಂಪನಕಟ್ಟೆ ಯಲ್ಲಿರುವ ಸರಕಾರಿ ಕಾಲೇಜಿನಲ್ಲಿಯೂ, ಉಡುಪಿಯ ಬೋರ್ಡ್‌ ಹೈಸ್ಕೂಲಿನ ಪೀಪಲ್ಸ್‌ ಹಾಲ್‌ನಲ್ಲಿಯೂ ಇರಿಸಲಾಯಿತು. ಅಲಂಕೃತ ವೇದಿಕೆಯ ಮೇಲೆ ಕರಂಡಕದ ಸ್ಥಾಪನೆ, ಮರುದಿನ ಬೆಳಗ್ಗೆವರೆಗೂ ಭಜನೆ, ಸಾರ್ವಜನಿಕ ದರ್ಶನ, ಮಾಲಾರ್ಪಣೆ ನಡೆದು ಶಿರಿಬೀಡು ಮಾರ್ಗವಾಗಿ ಮಲ್ಪೆಗೆ ಹೋಗಿ ವಡಭಾಂಡೇಶ್ವರದ ಕಡಲ ಕಿನಾರೆಯಲ್ಲಿ ಚಿತಾಭಸ್ಮವನ್ನು ವಿಸರ್ಜಿಸಿ ಹಲವರು ಸಮುದ್ರ ಸ್ನಾನ ಮಾಡಿದರು. ಆ ದಿನದ ನೆನಪಿಗಾಗಿ ಮಲ್ಪೆ ಬೀಚ್‌ನ ಗಾಂಧೀಜಿ ಪ್ರತಿಮೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಪುತ್ತೂರು, ಉಪ್ಪಿನಂಗಡಿ ಮೊದಲಾದೆಡೆ ಭಜನೆ ನಡೆದವು. ಕೆಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆದಿತ್ತು. ಸಂಜೆ ಉಡುಪಿ ಬೋರ್ಡ್‌ ಹೈಸ್ಕೂಲ್‌ನಿಂದ ಹೊರಟ ಗಾಂಧೀಜಿ ಭಾವಚಿತ್ರದ ಮೆರವಣಿಗೆ ಕಲ್ಸಂಕ, ಬಡಗುಪೇಟೆ, ರಥಬೀದಿ, ತೆಂಕಪೇಟೆ, ಕೊಳದ ಪೇಟೆ, ಕೋರ್ಟ್‌ ರಸ್ತೆ, ಜೋಡುಕಟ್ಟೆ ಮಾರ್ಗವಾಗಿ ಅಜ್ಜರಕಾಡು ಗಾಂಧಿ ಮೈದಾನಕ್ಕೆ ಬಂದು ಅಲ್ಲಿ ವೈಷ್ಣವ ಜನತೋ, ರಘುಪತಿ ರಾಘವ ರಾಜಾರಾಂ, ವಂದೇ ಮಾತರಂ ಹಾಡುಗಳನ್ನು ಹಾಡಿ ಪ್ರಮುಖರು ಗಾಂಧಿ ಸ್ಮರಣೆ ಮಾಡಿದರು. ಎಲ್ಲ ಧರ್ಮೀಯರಿಂದ ಪ್ರಾರ್ಥನೆ ನಡೆಯಿತು.

ಎಂಜಿಎಂ ಹೆಸರಿನ ಹಿಂದೆ: ಉಡುಪಿಯಲ್ಲಿ ಡಾ| ಟಿಎಂಎ ಪೈಯವರ ನೇತೃತ್ವದಲ್ಲಿ ಸ್ಥಾಪನೆಯಾಗ ಬೇಕಾಗಿದ್ದ ಉಡುಪಿಯ ಪ್ರಥಮ ಕಾಲೇಜಿನ ಸಮಿತಿಯ ಸಭೆ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜು ಎಂದು ಹೆಸರು ಇಟ್ಟು ಗೌರವ ಅರ್ಪಿಸಲು ತಳೆದ ನಿರ್ಣಯವನ್ನು ಚಿತಾಭಸ್ಮದ ವಿಸರ್ಜನೆ (ಫೆ. 12) ದಿನವೇ ಡಾ| ಪೈಯವರು ಪ್ರಕಟಿಸಿದರು. ಹೀಗಾಗಿ 1949ರಲ್ಲಿ ಆರಂಭಗೊಂಡ ಕಾಲೇಜಿಗೆ ಎಂಜಿಎಂ ಎಂಬ ಹೆಸರು ಬಂತು. 1952ರಲ್ಲಿ ಮಣಿಪಾಲದಲ್ಲಿ ಆರಂಭಗೊಂಡ ದೇಶದ ಪ್ರಥಮ ಖಾಸಗಿ ವೈದ್ಯಕೀಯ ಕಾಲೇಜಿಗೆ ಕಸ್ತೂರ್ಬಾ ಹೆಸರು ಇಡಲಾಯಿತು. ಕಸ್ತೂರ್ಬಾ ಅವರು ವಿವಿಧ ಸಂದರ್ಭಗಳಲ್ಲಿ ರೋಗಿಗಳಿಗೆ ಸಲ್ಲಿಸಿದ ಶುಶ್ರೂಷೆಯೇ ಇದಕ್ಕೆ ಕಾರಣ.
ಕವಿಗಳ ಹೃದಯದಲ್ಲಿ: ಗಾಂಧೀಜಿ ಸಾವು ಉಂಟು ಮಾಡಿದ ಶೋಕ ಅಸಂಖ್ಯ ಕವಿಗಳಿಂದ ಶೋಕ ಕವನಗಳಾಗಿ, ಚರಮ ಕಾವ್ಯಗಳಾಗಿ ಹರಿದು ಬಂದವು. ಕರ್ನಾಟಕದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರಿಗೆ ರೇಡಿಯೋದ ಸುದ್ದಿ ಬಿತ್ತರವಾಗುತ್ತಿದ್ದಂತೆ “ದೇಹಲಿ’ ಅಥವಾ “ಮಹಾತ್ಮರ ಕೊನೆಯ ದಿನ’ ಎಂಬ ಸುದೀರ್ಘ‌ ಕವನ ಸು#ರಿಸಿತು. ಇದನ್ನು ಆವೇಶದಲ್ಲಿ ಬರೆದಿದ್ದರು ಎನ್ನಬಹುದು. ಬರೆಯುತ್ತ ಬರೆಯುತ್ತ 130 ಚರಣಗಳನ್ನು ಬರೆದರು, ದುಃಖ ತಡೆದುಕೊಳ್ಳ ಲಾಗದೆ ಕವನವು ಅಲ್ಲಿಗೇ ನಿಂತಿತು. ಬಳಿಕ “ಮಹಾತ್ಮನ ಆತ್ಮಕ್ಕೆ’, “ಇನ್ನಿನಿಸು ನೀ ಮಹಾತ್ಮಾ ಬದುಕಬೇಕಿತ್ತು’ ಕವನ ಬರೆದರು.

ದಿನಕ್ಕೊಂದು ಕವನ: ಹಿಂದಿ ಕವಿ ಭವಾನಿಪ್ರಸಾದ್‌ ಮಿಶ್ರಾ 13 ದಿನಗಳ ಉಪವಾಸ ಮತ್ತು ಶೋಕಾ ಚರಣೆ ಮಾಡಿ ದಿನಕ್ಕೊಂದರಂತೆ 13 ಕವನಗಳನ್ನು ಗಾಂಧೀಜಿಯವರ ಆತ್ಮಕ್ಕೆ ಅರ್ಪಿಸಿದರು. ಇನ್ನೋರ್ವ ಹಿಂದಿ ಕವಿ ಹರಿವಂಶ ರಾಯ್‌ ಬಚ್ಚನ್‌ (ಹಿಂದಿ ಚಿತ್ರನಟ ಅಮಿತಾಭ್‌ ಬಚ್ಚನ್‌ ಅವರ ತಂದೆ) 108 ದಿನಗಳ ಕಾಲ ಕವನಗಳನ್ನು ಬರೆದಿದ್ದರೆಂಬುದು ಪ್ರಸಿದ್ಧ. ಗಾಂಧಿ ಅಂದರೆ ಸಾವಿರ ಹಾಡುಗಳಿಗೆ ಪ್ರೇರಣೆ ಎಂದು ಬಂಗಾಳಿ ಕವಿ ಸತ್ಯೇಂದ್ರನಾಥ್‌ ದತ್ತ ಹೇಳಿದ್ದರು. ದ.ಕ. ಜಿಲ್ಲೆಯ ಪುತ್ತೂರಿನ ಕವಿ ಕಡವ ಶಂಭು ಶರ್ಮರು “ಗಾಂಧಿ ನಿರ್ವಾಣಂ’ ಎಂಬ ಖಂಡಕಾವ್ಯವನ್ನು ರಚಿಸಿದ್ದರು.

Advertisement

ಒಂದು ಕೃತಿಯಲ್ಲಿ ಮೂವರು: ಗೋವಿಂದ ಪೈಯವರು ಏಸು, ಬುದ್ಧ, ಗಾಂಧಿಯವರ ಕಡೆಯ ದಿನ ಬಗ್ಗೆ ಗೊಲ್ಗೊಥಾ, ವೈಶಾಖೀ, ದೇಹಲಿ ಎಂಬ ಖಂಡ ಕಾವ್ಯಗಳನ್ನು ರಚಿಸಿದ್ದರು. ಉಡುಪಿ ಎಂಜಿಎಂ ಕಾಲೇಜಿನಲ್ಲಿ ಗೋವಿಂದ ಪೈ ಸಂಶೋಧನ ಕೇಂದ್ರವನ್ನು ಆರಂಭಿಸಿದಾಗ 1976ರಲ್ಲಿ ಪ್ರಸಿದ್ಧ ಕಲಾವಿದ ಕೆ.ಕೆ.ಹೆಬ್ಟಾರರು ಪ್ರಾಂಶುಪಾಲರಾಗಿದ್ದ ಪ್ರೊ|ಕು.ಶಿ.ಹರಿದಾಸ ಭಟ್ಟರ ಆತ್ಮೀಯತೆಗಾಗಿ ಮೂರೂ ಸನ್ನಿವೇಶ ಗಳನ್ನು “ಮಹಾತ್ಮರ ಮರಣ’ ಎಂಬ ಒಂದೇ ಕಲಾಕೃತಿಯಲ್ಲಿ ರಚಿಸಿಕೊಟ್ಟರು.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next