Advertisement

ಗಾಂಧಿ ಉಳಿದಿದ್ದ ಮನೆಯ ಹೆಸರು ಇಡೀ ವಾರ್ಡ್‌ಗೆ !

12:29 AM Aug 14, 2021 | Team Udayavani |

ಕುಂದಾಪುರ ಪುರಸಭೆಯ 23 ವಾರ್ಡ್‌ಗಳ ಪೈಕಿ ಶಾಂತಿ ನಿಕೇತನ ಸಹ ಒಂದು. ಶಾಸ್ತ್ರಿ ವೃತ್ತದಿಂದ ಸರ್ವಿಸ್‌ ರಸ್ತೆಯಲ್ಲಿ ಸಾಗುವಾಗ ಶಾಂತಿನಿ ಕೇತನ ಎಂಬ ಕಬ್ಬಿಣದ ಸ್ವಾಗತ ಕಮಾನು ಸಿಗುತ್ತದೆ. ಅದರ ಬುಡದಲ್ಲೇ “ಶಾಂತಿ ನಿಕೇತನ ಗಾಂಧಿ ನೆಹರೂ ನಿಲಯ 1934, 1937′ ಎಂದಿದೆ.

Advertisement

ಈ ದ್ವಾರ ಪ್ರವೇಶಿಸಿ ಸ್ವಲ್ಪ ದೂರ ಸಾಗಿದಾಗ ಇದ್ದ ಶಾಂತಿನಿಕೇತನ ಎಂಬ ಮನೆ ಯಲ್ಲಿ ಗಾಂಧಿ ತಂಗಿದ್ದರು. ಹಾಗಾಗಿ ಇಡೀ ವಾರ್ಡ್‌ಗೆ ಶಾಂತಿನಿಕೇತನ ಎಂದು ಕರೆಯಲಾಯಿತು. ಜವಾಹರ ಲಾಲ್‌ ನೆಹರೂ ಹಾಗೂ ಇಂದಿರಾ ಗಾಂಧಿ ಇದೇ ಮನೆಯಲ್ಲಿ ಉಳಿದಿದ್ದರಂತೆ. 1934ರ ಫೆ. 22ರಂದು ತಮಿಳುನಾಡು ಪ್ರವಾಸ ಮುಗಿಸಿ ರೈಲಿನಲ್ಲಿ ಮೈಸೂ ರು ತಲುಪಿ ಕೊಡ ಗಿಗೆ ಬಂದರು. ಅಲ್ಲಿಂದ ಕಾರಿನಲ್ಲಿ ದಕ್ಷಿಣ ಕನ್ನಡಕ್ಕೆ ಆಗಮಿಸಿದ್ದರು. ದಾರಿ ಯುದ್ದಕ್ಕೂ ವಿವಿಧೆಡೆ ನಿಧಿ ಸಂಗ್ರಹ, ಸಭೆಗಳಲ್ಲಿ ಪಾಲ್ಗೊಂಡು ಜನರನ್ನು ಚಳವಳಿಗೆ ಹುರಿದುಂಬಿಸಿ ದರು. ಮೂಲ್ಕಿ, ಪಡುಬಿದ್ರಿ, ಕಾಪು, ಉದ್ಯಾವರ, ಕಟಪಾಡಿ, ಉಡುಪಿ,  ಕೋಟ ಮಾರ್ಗವಾಗಿ ಫೆ. 25 ರಾತ್ರಿ 8ಕ್ಕೆ ಕುಂದಾಪುರ ತಲುಪಿದ್ದರು.  ದೊಂದಿ ಬೆಳಕಿನಲ್ಲೇ ಹಿರಿಯ ಸಾಹು ಕಾರ್‌ ಮಂಜಯ್ಯ ಶೇರಿಗಾರ್‌ ಅಧ್ಯಕ್ಷತೆಯ ಸಭೆಯಲ್ಲಿ  ಅಸ್ಪೃಶ್ಯತೆ ವಿರುದ್ಧ ಬಗ್ಗೆ ಭಾಷಣ ಮಾಡಿದ್ದರು.

ಬಳಿಕ ತಮಗೆ ಬಂದ ಉಡುಗೊರೆಗಳನ್ನು ಹರಾಜು ಹಾಕಿ 400 ರೂ.ಗಳನ್ನು ಬಿಹಾರದ ಅತಿವೃಷ್ಟಿ ಪರಿಹಾರ ನಿಧಿಗೆ ಸಂಗ್ರಹಿಸಿದ್ದರು. ರಾತ್ರಿ ನಾರಾಯಣ ಕಾಮತ್‌ರ ಶಾಂತಿ ನಿಕೇತನದಲ್ಲಿ ಉಳಿದು, ಫೆ.26ರಂದು ಮುಂಜಾನೆ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು. ಬಳಿಕ ಇಡೀ ದಿನ ಮೌನವ್ರತ ಆಚರಿಸಿದ್ದರು. ಮರು ದಿನ ಗಂಗೊಳ್ಳಿಗೆ ತೆರಳಿ “ದಯಾವತಿ’ ಎಂಬಉಗಿ ಹಡಗಿ (ಸ್ಟೀಮರ್‌) ನಲ್ಲಿ ಕಾರವಾರಕ್ಕೆ ಹೋದರು.

ಉಭಯಜಿಲ್ಲೆಗಳ ಭೇಟಿ ಸಮಯದಲ್ಲಿ ನದಿಗಳನ್ನು ದಾಟಲು ಹಲವು ದೋಣಿಗಳನ್ನು ಇಟ್ಟು ಹಲಗೆಗಳಿಂದ “ಜಂಗಲ್‌’ ನಿರ್ಮಿಸಲಾಗುತ್ತಿತ್ತು. ಇದರಲ್ಲಿ ಗಾಂಧಿ ಬಳಗ ಹಾಗೂ ಅವರು ಪ್ರಯಾಣಿಸುತ್ತಿದ್ದ ಕಾರು ನದಿಯನ್ನು ದಾಟುತ್ತಿತ್ತು.

ಶಾಂತಿ ನಿಕೇತನದಲ್ಲಿ ನಾರಾಯಣ ಕಾಮತರ ಪುತ್ರ ಗೋಪಾಲಕೃಷ್ಣ ಕಾಮತ್‌ ವಾಸವಿದ್ದರು. 1960ರಲ್ಲಿ ಗಾಂಧೀಜಿ ನೆನಪಿನಲ್ಲಿ ಸ್ವಾಗತ ಕಮಾನು ರಚಿಸಿ ರಸ್ತೆಗೆ ಶಾಂತಿನಿಕೇತನ ಎಂಬ ಹೆಸರು ಇಡಲಾಯಿತು. ಅನೇಕ ವರ್ಷಗಳ ಕಾಲ ಗಾಂಧಿ ತಂಗಿದ್ದ ಮನೆಯಿತ್ತು. ಕೆಲವು ವರ್ಷಗಳ ಹಿಂದೆ ಈ ಜಾಗವನ್ನು ಸುರೇಶ್‌ ಬೆಟ್ಟಿನ್‌ ಅವರು ಖರೀದಿಸಿದ್ದಾರೆ. ಈಗ ಹಳೆಯ ಮನೆಯೂ ಇಲ್ಲ. ಒಂದು ಸಣ್ಣ ಕುರುಹಷ್ಟೇ ಇದೆ. ಹೆಸರು ಶಾಶ್ವತ ವಾಗಿದೆ.

Advertisement

ಕಾರ್ನಾಡಿನ ಪಂಚಾಯತ್‌ ಮೈದಾನ :

ಸ್ವಾತಂತ್ರ್ಯಕ್ಕಿಂತ ಸುಮಾರು 150 ವರ್ಷಗಳ ಹಿಂದೆ ಮೂಲ್ಕಿ ಕರಾ ವಳಿಯ ಪ್ರಮುಖ ಕೇಂದ್ರ.  ಬಪ್ಪನಾಡು ಶಂಭು ಶೆಟ್ಟಿ, ಮಾಜಿ ಶಾಸಕ ಡಾ| ಸಂಜೀವನಾಥ ಐಕಳ, ಉಪ್ಪಿಕಳ ರಾಮರಾವ್‌, ಕೋಟೆಕೇರಿ ಸಂಜೀವ ಕಾಮತ್‌ ಮತ್ತಿತರರು ಸ್ವಾತಂತ್ರ್ಯ ಚವಳಿಯಲ್ಲಿ ಜೈಲುವಾಸ ಅನುಭವಿಸಿದ್ದ ಪ್ರಮುಖರು. ಸಮಾಜ ಸೇವಕ ಮೂಲ್ಕಿ ರಾಮಕೃಷ್ಣ ಪೂಂಜ ಅವರ ನಾಯಕತ್ವದಲ್ಲಿ ಡಾ| ರಾಯಪ್ಪ ಕಾಮತ್‌, ಬಂಗ್ಗೆ ಸೀತಾರಾಮ ಕಾಮತ್‌ ಮತ್ತು ಬೋಳ ನಾರಾಯಣ ರಾವ್‌ ಮತ್ತು ಬಪ್ಪನಾಡು ಭೋಜ ರಾವ್‌ ಮುಂತಾದ ಹಲವು ನಾಯಕರು ಹೋರಾಟಕ್ಕೆ ಧುಮುಕಿದರು.

ಇಂಥ ಊರಿಗೆ ಆಗಮಿಸಿದ ಗಾಂಧೀಜಿ, ಕಾರ್ನಾಡಿನ ಮೈದಾನದಲ್ಲಿ  ಜನರನ್ನು ಉದ್ದೇಶಿಸಿ ಮಾತನಾಡಿದರು. ಆದೇ ಮೈದಾನ ಇಂದು ಗಾಂಧಿ ಮೈದಾನ ಎಂದೇ ಪ್ರಸಿದ್ಧವಾಯಿತು. ಮೂಲ್ಕಿಯ ರಾಮಕೃಷ್ಣ ಪೂಂಜರ ಮನೆಯಲ್ಲಿ ಗಾಂಧೀಜಿ 2 ದಿನ ತಂಗಿದ್ದರು. ಪೂಂಜರ ಮೂಲಕ ಸ್ಥಳೀಯರು ಚಳವಳಿಗೆ ನಗ-ನಗದು ದೇಣಿಗೆಯನ್ನು ಅರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next