ಮಡಿಕೇರಿ : ಜಿಲ್ಲೆಯ ಶಿವ ದೇವಾಲಯಗಳು ಸೇರಿದಂತೆ ಬಹುತೇಕ ಎಲ್ಲಾ ದೇಗುಲಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರಗಿದವು.
ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ, ಪೇರ್ಮಾಡು ಶ್ರೀ ಈಶ್ವರ ದೇವಸ್ಥಾನ, ಮಡಿಕೇರಿಯ ಶ್ರೀ ಓಂಕಾರೇಶ್ವರ, ಶನಿವಾರಸಂತೆಯ ಗೌರಿಶಂಕರ, ಪಾಲೂರು ಮಹಾಲಿಂಗೇಶ್ವರ, ಬಾಡಗರಕೇರಿಯ ಶ್ರೀಮೃತ್ಯುಂಜಯ, ಇರ್ಪು ಶ್ರೀರಾಮೇಶ್ವರ, ವಿರಾಜಪೇಟೆಯ ಅಂಗಾಳ ಪರಮೇಶ್ವರಿ, ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ರುದ್ರಾಭಿಷೇಕ, ರುದ್ರಹೋಮಗಳು ನೆರವೇರಿದವು.
ಪೇರ್ಮಾಡು ಈಶ್ವರ ದೇಗುಲ ಹಾಗೂ ಇರ್ಪು ಶ್ರೀರಾಮೇಶ್ವರ ದೇಗುಲಕ್ಕೆ ವಿಶೇಷ ಮಹತ್ವವಿದ್ದು, ಇರ್ಪುವಿನಲ್ಲಿ ಜಾಗರಣೆಯ ಮರುದಿನ ಪವಿತ್ರ ಸ್ನಾನ ಹಾಗೂ ಜಾತ್ರೆಯೂ ನಡೆಯಲಿದೆ.
ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ರುದ್ರ ಹೋಮ, ರುದ್ರನಾಮ ಪಠಣ, ಅಭಿಷೇಕ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ನಗರದ ದಾಸವಾಳ ಬಳಿಯ ಮಡಿಕಟ್ಟೆಯ ಶ್ರೀವೀರಭದ್ರ ಮುನೀಶ್ವರ ದೇಗುಲದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ವಿಶೇಷ ದೈವಿಕ ಕೈಂಕರ್ಯಗಳು ನಡೆದವು. ಬ್ರಹ್ಮಕುಮಾರಿ ಈಶ್ವರಿ ಪ್ರಾರ್ಥನಾ ಮಂದಿರದಲ್ಲಿ ಶಿವಲಿಂಗಗಳ ಪ್ರದರ್ಶನ ಮತ್ತು ಮೆರವಣಿಗೆ ನಡೆಯಿತು. ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದಲ್ಲಿರುವ ಶ್ರೀಶನೇಶ್ವರ ಮತ್ತು ನವಗ್ರಹ ದೇಗುಲದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆಗಳು, ಅಭಿಷೇಕ, ಶಾಂತಿಪೂಜೆ ಹಾಗೂ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಿತು.
ಸಿದ್ದಾಪುರದ ನೆಲ್ಯಹುದಿಕೇರಿಯ ಶ್ರೀಮುತ್ತಪ್ಪ ದೇವಾಲಯದಲ್ಲಿ ಮಹಾಶಿವರಾತ್ರಿ ಆಚರಣೆಯು ವಿವಿಧ ಧಾರ್ಮಿಕ ಪ್ರವಚನಗಳೊಂದಿಗೆ ನಡೆಯಿತು. ಶ್ರೀಮುತ್ತಪ್ಪ ಯುವಕಲಾ ಸಮಿತಿಯ ವತಿಯಿಂದ ಮುತ್ತಪ್ಪ ಸಭಾಂಗಣದಲ್ಲಿ ಕಪಿಲಾಶ್ರಮ ಉತ್ತರ ಕಾಶಿಯ ರಾಮಚಂದ್ರ ಸ್ವಾಮಿಜೀಯವರಿಂದ ಆಶೀರ್ವಚನ ಹಾಗೂ ಧಾರ್ಮಿಕ ಪ್ರವಚನ ನಡೆಯಿತು.
ವಿವಿಧ ದೇಗುಲ ಸಮಿತಿಗಳ ವತಿಯಿಂದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತರಿಂದ ಶಿವ ಜಾಗರಣೆಯೂ ನಡೆಯಿತು. ಬಹುತೇಕ ಎಲ್ಲಾ ದೇಗುಲಗಳಲ್ಲಿ ಭಕ್ತ ಸಮೂಹಕ್ಕೆ ಅನ್ನಸಂತರ್ಪಣೆ ಜರುಗಿತು.