ಇತ್ತೀಚೆಗಷ್ಟೇ ಕೃಷ್ಣ ಮಹೇಶ್, ಪೂರ್ಣಿಮಾ ಜೋಡಿಯಾಗಿ ಅಭಿನಯಿಸಿರುವ “ಮಹಾರೌದ್ರಂ’ ಚಿತ್ರ ತೆರೆಗೆ ಬಂದಿದೆ. ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಂ ಲವ್ ಕಥಾಹಂದರದ ನೈಜ ಘಟನೆಯಾಧಾರಿತ ಈ ಚಿತ್ರವನ್ನು “ಶ್ರೀನಿಮಿಷ ಮೂವೀಸ್’ ಮತ್ತು “ಮೌಲ್ಯ ಸಂದೇಶ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ವಂಶಿ ಸುನೀಲ್ ನಿರ್ಮಿಸಿದ್ದಾರೆ.
ಇನ್ನು ಸುಮಾರು 2 ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಿರ್ಮಾಪಕ, ನಿರ್ದೇಶಕ, ಚಿತ್ರ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಡಾ. ಆರ್. ಎಂ ಸುನೀಲ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ “ಮಹಾರೌದ್ರಂ’
ಕಥಾಹಂದರ ಮತ್ತು ಚಿತ್ರದ ನಿರೂಪಣೆಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಸ್ತುತ ಸಮಾಜದಲ್ಲಿ ಭ್ರಷ್ಟ ರಾಜಕಾರಣಿಗಳು ಹೇಗೆ ಅಮಾಯಕ ಹುಡುಗರನ್ನು ದುರುಪಯೋಗಪಡಿಸಿ ಕೊಂಡು ಅವರ ಜೀವನ ಹಾಳು ಮಾಡುತ್ತಾರೆ ಅನ್ನೊದು ಈ ಚಿತ್ರದ ಕಥೆಯ ಒಂದು ಎಳೆ.
ಪತ್ರಕರ್ತರಾಗಿ ತಮ್ಮ ಹಲವು ವರ್ಷಗಳ ಅನುಭವವನ್ನು ನಿರ್ದೇಶಕ ಡಾ. ಆರ್. ಎಂ ಸುನೀಲ್ ಕುಮಾರ್, ಈ ಚಿತ್ರದ ಮೂಲಕ ತೆರೆ ಮೇಲೆ ತಂದಿದ್ದಾರೆ. ಚಿತ್ರದ ಕಥೆ, ಸಂಭಾಷಣೆ, ನಿರೂಪಣೆ ಎಲ್ಲವೂ ನೈಜ ಘಟನೆಯಾಧಾರಿತ ಚಿತ್ರಕ್ಕೆ ಪೂರಕವಾಗಿದ್ದು, ನಿರ್ದೇಶಕನಾಗಿ ಇಂಥ ದ್ದೊಂದು ಪ್ರಯತ್ನವನ್ನು ತೆರೆಮೇಲೆ ತರುವಲ್ಲಿ ಡಾ. ಆರ್. ಎಂ ಸುನೀಲ್ ಕುಮಾರ್ ಯಶಸ್ವಿಯಾಗಿದ್ದಾರೆ.
“ಕಣ್ಣಾರೆ ಕಂಡ ಹತ್ತಾರು ಘಟನೆಗಳನ್ನು ಆಧರಿಸಿ “ಮಹಾರೌದ್ರಂ’ ಸಿನಿಮಾ ಮಾಡಲಾಗಿದ್ದು, ಎಲ್ಲರಿಗೂ ಸಂಬಂಧಿಸಿದ ವಿಷಯ ಕಥೆಯಲ್ಲಿರುವುದರಿಂದ, ನೋಡುಗರಿಗೆ ಸಿನಿಮಾ ಕನೆಕ್ಟ್ ಆಗುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು, ಚಿತ್ರರಂಗದ ಅನೇಕ ಗಣ್ಯರು ಇಂಥದ್ದೊಂದು ಪ್ರಯೋಗದ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ಸುನೀಲ್.
ಸದ್ಯ “ಮಹಾರೌದ್ರಂ’ ನಿರ್ದೇಶನದಲ್ಲಿ ಯಶಸ್ವಿಯಾಗಿರುವ ಡಾ. ಆರ್. ಎಂ ಸುನೀಲ್ ಕುಮಾರ್, ಇಂಥದ್ದೇ ಮತ್ತೂಂದು ಕಥೆಯ ಮೇಲೆ ಸ್ಕ್ರಿಪ್ಟ್ ರೆಡಿ ಮಾಡಿಕೊಳ್ಳುತ್ತಿದ್ದಾರೆ. “ಕನ್ನಡದ ಸ್ಟಾರ್ ನಟರೊಬ್ಬರು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಿನಿಮಾ ಮಾತುಕಥೆಯ ಹಂತದಲ್ಲಿದೆ. ಶೀಘ್ರದಲ್ಲಿಯೇ ಈ ಹೊಸ ಸಿನಿಮಾದ ಬಗ್ಗೆ ಮಾಹಿತಿ ನೀಡಲಿದ್ದೇನೆ’ ಎನ್ನುತ್ತಾರೆ ಸುನೀಲ್ ಕುಮಾರ್.