Advertisement

13ರಂದು ಮಹರ್ಷಿ ವಾಲ್ಮೀಕಿ ಜಯಂತಿ

07:01 PM Oct 04, 2019 | Suhan S |

ಹಾವೇರಿ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ. 13 ರಂದು ನಗರದ ವಾಲ್ಮೀಕಿ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯಕ್ರಮ ಕೈಗೊಳ್ಳುವಂತೆ ಜಿಲ್ಲಾ ಧಿಕಾರಿ ಕೃಷ್ಣ ಭಾಜಪೇಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ವ್ಯವಸ್ಥಿತವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು, ಅಂದು ಬೆಳಗ್ಗೆ ನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಹೊರಡಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಾಲ್ಮೀಕಿ ಭವನ ತಲುಪಲಿದೆ. ಈ ಮೆರವಣಿಗೆಗೆ ಕಲಾತಂಡಗಳನ್ನು ಒದಗಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅ ಧಿಕಾರಿಗಳಿಗೆ ಹಾಗೂ ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆಗೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಲು ಸಮಾಜದ ಮುಖಂಡರು ಸೂಚಿಸಿರುವ ರಮೇಶ ತೆವರಿ ಅವರನ್ನು ವಿಶೇಷ ಉಪನ್ಯಾಸಕರಾಗಿ ಆಹ್ವಾನಿಸಲಾಗುವುದು ಹಾಗೂ ಕಳೆದ 2018-19ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಮುದಾಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ತಿಳಿಸಿದರು.

ಸಭೆಯಲ್ಲಿ ಜಿಪಂ ಸದಸ್ಯ ಎನ್‌.ಎಂ. ಈಟೇರ ಮಾತನಾಡಿ, ಜಿಲ್ಲಾ ವಾಲ್ಮೀಕಿ ಭವನದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ರಸ್ತೆ ನಿರ್ಮಾಣ ಮಾಡಿಕೊಡಬೇಕು. ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ನಿಗಮದ ಕಚೇರಿಯನ್ನು ವಾಲ್ಮೀಕಿ ಭವನಕ್ಕೆ ವರ್ಗಾಯಿಸಬೇಕು ಎಂದು ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರು ವಾಲ್ಮೀಕಿ ಜಯಂತಿಯನ್ನು ಅ. 13ರ ಬದಲಿಗೆ 14 ರಂದು ಆಯೋಜಿಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡರು.

ಈ ಕುರಿತಂತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿಪಂ ಸದಸ್ಯ ಎನ್‌.ಎಂ.ಈಟೇರ, ರತ್ನಾ ಭೀಮಕ್ಕನವರ, ರಮೇಶ ಆನವಟ್ಟಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದೇವರಾಜ್‌, ವಾರ್ತಾಧಿಕಾರಿ ಡಾ| ಬಿ.ಆರ್‌.ರಂಗನಾಥ್‌, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಜಮಖಾನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಸಮಾಜದ ವಿವಿಧ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next