ಹನೂರು: ಲಕ್ಷಾಂತರ ಭಕ್ತಾದಿಗಳ ಉಘೇ ಮಾದಪ್ಪ, ಉಘೇ ಮಾದಪ್ಪ ಜಯಘೋಷದ ನಡುವೆ ಮಲೆ ಮಾದಪ್ಪನ ಮಹಾಶಿವರಾತ್ರಿಯ ಮಹಾರಥೋತ್ಸವವು ವಿಜೃಂಭಣೆಯಿಂದ ಜರುಗಿತು.
ಕಳೆದ 5 ದಿನಗಳಿಂದ ನಡೆಯುತ್ತಿರುವ ಮಹಾ ಶಿವರಾತ್ರಿ ಜಾತ್ರೆಯ ಬಹುಮುಖ್ಯ ಭಾಗವಾಗಿದ್ದ ಮಲೆ ಮಾದಪ್ಪನ ಮಹಾರಥೋತ್ಸವವು ಮಂಗಳವಾರ ಬೆಳಗ್ಗೆ 8.20 ರಿಂದ 9 ಗಂಟೆಯವರೆಗಿನ ಶುಭ ವೇಳೆಯಲ್ಲಿ ವಿಜೃಂಭಣೆಯಿಂದ ಜರುಗಿತು.
ರಥೋತ್ಸವಕ್ಕೂ ಮುನ್ನ ಪೂಜಾ ಕೈಂಕರ್ಯಗಳು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಮಹಾರಥೋತ್ಸವ ಜರುಗುವ ಮುನ್ನ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಿ ಕಾರ್ಜುನ ಶ್ರೀಗಳ ದಿವ್ಯಸಾನ್ನಿಧ್ಯದಲ್ಲಿ ವಿಧಿ ವಿಧಾನ ಗಳೊಂದಿಗೆ ಬೇಡಗಂಪಣ ಕುಲಪದ್ಧತಿಯಂತೆ ವಿಧಿ ವಿಧಾನಗ ಳೊಂದಿಗೆ ಪೂಜಾ ಕೈಂಕರ್ಯಗಳು ಜರುಗಿದವು. ಸಂಪ್ರದಾಯದಂತೆ ಉತ್ಸವವಮೂರ್ತಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ಮಂಗಳವಾದ್ಯ, ಸತ್ತಿಗೆ-ಸುರಪಾನಿ, ಜಾಗಟೆ ಮೇಳದೊಂದಿಗೆ ದೇವಾಲಯದ ಗರ್ಭಾಂಗಣದ ಸುತ್ತಲೂ ಬಿಳಿ ಕುದುರೆ ಉತ್ಸವವನ್ನು ನೆರವೇರಿಸಲಾಯಿತು.
ಬಳಿಕ ಉತ್ಸವಮೂರ್ತಿಯನ್ನು ದೇವಾಲಯದ ಹೊರಾಂಗಣದಲ್ಲಿ ಅಲಂಕೃತಗೊಂಡಿದ್ದ ಮಹಾರಥೋತ್ಸವದ ಬಳಿಕ ತಂದು ರಥದ ಸುತ್ತಲೂ ಪ್ರದಕ್ಷಿಣೆ ಹಾಕಿ ಪೂಜೆಗಳನ್ನು ನೆರವೇರಿಸಿ ಬೂದುಗುಂಬಳಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮೊಳಗಿದ ಜಯಘೋಷಗಳು: ಬೂದುಗುಂಬಳ ಕಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆಯೇ ನೆರೆದಿದ್ದ ಲಕ್ಷಾಂತರ ಭಕ್ತಾದಿಗಳ ಉಘೇಮಾದಪ್ಪ, ಉಘೇ ಮಾದಪ್ಪ, ಘೋಷಣೆ ಶ್ರೀ ಕ್ಷೇತ್ರಾದ್ಯಂತ ಮೊಳಗಿತು. ಈ ವೇಳೆ ಭಕ್ತಾದಿಗಳು ರಥೋತ್ಸವವನ್ನು ಎಳೆಯಲು ನಾ ಮುಂದು, ತಾ ಮುಂದು ಎಂದು ಮುಗಿಬೀಳುತ್ತಿದ್ದರು. ಈ ವೇಳೆ ಪೊಲೀಸರು ಭಕ್ತಾದಿಗಳನ್ನು ನಿಯಂತ್ರಿಸಲು ಪರದಾಡುವಂತಾಗಿತ್ತು. ರಥವು ದೇವಾಲಯದ ಸುತ್ತಲು ಒಂದು ಸುತ್ತು ಹಾಕುವಾಗ ಭಕ್ತಾದಿಗಳು ತಮ್ಮ ಜನೀನಿನಲ್ಲಿ ಬೆಳೆದಿದ್ದ ದವಸ ಧಾನ್ಯ, ಚಿಲ್ಲರೆ ನಾಣ್ಯ, ಹೂ-ಹಣ್ಣು, ಜವನಗಳನ್ನು ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಥೋತ್ಸವವು ಸಂಪನ್ನವಾಗಿ ಆವರಣದಲ್ಲಿ ನಿಂತ ಬಳಿಕವೂ ಭಕ್ತಾದಿಗಳು ರಥಕ್ಕೆ ನಮಸ್ಕರಿಸುವ ಮೂಲಕ ಭಕ್ತಿಯನ್ನು ಮೆರೆದರು.
ಚಾಮರಾಜನಗರ ಜಿಲ್ಲಾಧಿಕಾರಿ ಡಾ.ರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ, ಉಪ ಕಾರ್ಯದರ್ಶಿ ಬಸವರಾಜು ಹಾಗೂ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ಇದ್ದರು. ಲಾಡು ಖರೀದಿಗೆ ಮುಗಿಬಿದ್ದ ಸಾವಿರಾರು ಭಕ್ತರು : ಮಹಾರಥೋತ್ಸವವು ಮುಕ್ತಾಯವಾದ ಬಳಿಕ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತಾದಿಗಳು ತಮ್ಮ ಸ್ವಗ್ರಾಮಕ್ಕೆ ಹಿಂದಿಗುಗಿದ್ದರಿಂದ ಲಾಡು ಖರೀದಿಗೆ ಮುಗಿಬಿದ್ದಿದ್ದರು. ಕೆಲವರು ಸರದಿ ಸಾಲಿನಲ್ಲಿ ನಿಂತು ಲಾಡು ಖರೀದಿಗೆ ಮುಂದಾದರೆ ಇನ್ನು ಕೆಲವರು ವಾಮಮಾರ್ಗದಲ್ಲಿ ಲಾಡು ಖರೀದಿಗೆ ಮುಗಿ ಬೀಳುತ್ತಿದ್ದುದು ಕಂಡು ಬಂದಿತು.
– ವಿನೋದ್ ಎನ್ ಗೌಡ