Advertisement

Madappa: ವಿಜೃಂಭಣೆಯ ಮಾದಪ್ಪನ ಮಹಾರಥೋತ್ಸವ

04:27 PM Nov 16, 2023 | Team Udayavani |

ಹನೂರು: ಲಕ್ಷಾಂತರ ಭಕ್ತಾದಿಗಳ ಉಘೇ ಉಘೇ, ಉಘೇ ಮಾದಪ್ಪ ಜೈಕಾರ ಮತ್ತು ಘೋಷಣೆಗಳೊಂದಿಗೆ ದೀಪಾವಳಿ ಜಾತ್ರಾ ಮಹೋತ್ಸವದ ಮಹಾ ರಥೋತ್ಸವವು ಮಂಗಳವಾರ ಬೆಳಿಗ್ಗೆ ವಿಧಿವಿಧಾನ ಗಳೊಂದಿಗೆ ಸಂಪನ್ನವಾಯಿತು.

Advertisement

ಭಕ್ತಕುಲಕೋಟಿಯ ಆರಾಧ್ಯ ದೈವ ಮಲೆ ಮಾದ ಪ್ಪನ 5 ದಿನಗಳ ದೀಪಾವಳಿ ಜಾತ್ರಾ ಮಹೋತ್ಸವವು ಮಂಗಳವಾರ ಬೆಳಿಗ್ಗೆ 8.40 ರಿಂದ 9.10ರವರೆಗಿನ ಶುಭ ವೇಳೆಯಲ್ಲಿ ಲಕ್ಷಾಂತರ ಭಕ್ತಾದಿಗಳ ಸಮ್ಮುಖ ದಲ್ಲಿ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವಕ್ಕೂ ಮುನ್ನ ಬಿಳಿಕುದುರೆ ಉತ್ಸವ: ಮಲೆ ಮಾದಪ್ಪನ ದೀಪಾವಳಿ ಜಾತ್ರಾ ಮಹೋತ್ಸವದ ಮಹಾರಥೋತ್ಸವಕ್ಕೂ ಮುನ್ನ ಸಾಲೂರು ಬೃಹ ನ್ಮಠದ ಶಾಂತಮಲ್ಲಿಕಾರ್ಜುನ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಬಿಳಿಕುದುರೆ ಉತ್ಸವ ನೆರವೇರಿಸಲಾಯಿತು. ಮಹಾ ರಥೋತ್ಸವದ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಲು ಶಾಂತಮಲ್ಲಿಕಾರ್ಜುನ ಶ್ರೀಗಳನ್ನು ಸತ್ತಿಗೆ-ಸುರಪಾನಿ, ಮಂಗಳವಾದ್ಯ ಸಮೇತ ದೇವಾಲಯಕ್ಕೆ ಕರೆತರ ಲಾಯಿತು. ಬಳಿಕ ಬೇಡಗಂಪಣ ಅರ್ಚಕರಿಂದ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿದ್ದ ಬಿಳಿಕುದುರೆ ಉತ್ಸವಕ್ಕೆ ಉತ್ಸವಮೂರ್ತಿಗಳನ್ನು ಇಟ್ಟು ಬೇಡಗಂಪಣ ಅರ್ಚಕರಿಂದ ವಿಧಿವಿಧಾನಗಳೊಂ ದಿಗೆ ಧೂಪ-ದೀಪಗಳಿಂದ ಪೂಜೆ ನೆರವೇರಿಸಿ ಮಹಾ ಮಂಗಳಾರತಿ ಬೆಳಗಿ ಬಿಳಿ ಕುದುರೆ ಉತ್ಸವ ನೆರವೇರಿಸಲಾಯಿತು.

ಮಹಾರಥೋತ್ಸವ: ಬಿಳಿಕುದುರೆ ಉತ್ಸವ ನೆರವೇರಿ ಸಿದ ಬಳಿಕ ಮಂಗಳವಾದ್ಯ ಸಮೇತ ಉತ್ಸವ ಮೂರ್ತಿ ಯನ್ನು ಮೆರವಣಿಗೆ, ಮಂಗಳವಾದ್ಯ ಸಮೇತ ಮಹಾ ರಥೋತ್ಸವದ ಬಳಿಗೆ ತಂದು ರಥೋತ್ಸವದ ಮೇಲೆ ಇಟ್ಟು ನೆರವೇರಿಸಲಾಯಿತು.

ಬಳಿಕ ಬೂದು ಗುಂಬಳ ಕಾಯಿಯಿಂದ ಮಹಾರಥೋತ್ಸವಕ್ಕೆ ಆರತಿ ಬೆಳಗಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮಹಾರಥೋತ್ಸವವು ಭಕ್ತಾಇಗಳ ಉಘೇ ಮಾದಪ್ಪ, ಉಘೇ ಮಾದಪ್ಪ, ಉಘೇ ಮಾಯ್ಕರ ಘೋಷಣೆಗಳೊಂದಿಗೆ ಸಂಭ್ರಮದಿಂದ ಜರುಗಿತು. ರಥೋತ್ಸವದ ವೇಳೆ ದೇವಾಲಯದ ಹೊರಾಂಗಣದಲ್ಲಿ ಜಮಾಯಿಸಿದ್ದ ಲಕ್ಷಾಂತರ ಭಕ್ತಾದಿಗಳು ಹೂ-ಹಣ್ಣು ಜವನ ಸಮರ್ಪಿಸಿ ಭಕ್ತಿ ಭಾವ ಮೆರೆದರು. ಇದೇ ವೇಳೆ ಕೆಲ ಭಕ್ತಾದಿಗಳು ತಮ್ಮ ಜಮೀನಿನಲ್ಲಿ ಬೆಳೆದು ಮೀಸಲಾಗಿ ಇಟ್ಟಿದ್ದ ದವಸ-ಧಾನ್ಯ, ಚಿಲ್ಲರೆ ನಾಣ್ಯಗಳನ್ನು ರಥೋತ್ಸವಕ್ಕೆ ಸಮರ್ಪಿಸಿದರು.

ಇನ್ನೂ ಕೆಲ ಭಕ್ತಾದಿಗಳು ಬಾಳೆಹಣ್ಣಿನ ಮೇಲೆ ತಮ್ಮ ಇಷ್ಟಾರ್ಥಗಳನ್ನು ಬರೆದು ಇಷ್ಟಾರ್ಥ ಈಡೇರಿಸುವಂತೆ ಮೊರೆ ಇಟ್ಟರು. ಮಹಾರಥೋತ್ಸವವನ್ನು ಎಳೆಯಲು ಭಕ್ತಾದಿಗಳು ನಾ ಮುಂದು, ತಾ ಮುಂದು ಎಂದು ಮುಗಿ ಬೀಳುತ್ತಿದ್ದರು. ಈ ವೇಳೆ ಭಕ್ತಾದಿಗಳನ್ನು ನಿಯಂತ್ರಿ ಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

Advertisement

ಸಾಂಸ್ಕೃತಿಕ ಕಾರ್ಯಕ್ರಮ: ಮಂಗಳವಾರ ಸಂಜೆ 7 ಗಂಟೆಯಿಂದ 10 ಗಂಟೆಯವರೆಗೆ ಮೈಸೂರಿನ ಬಂಡಿಪಾಳ್ಯದ ಟೀಮ್‌ ಪವರ್‌ಸ್ಟಾರ್‌ ಮ್ಯೂಸಿಕಲ್‌ ಇವೆಂಟ್ಸ್‌ ನ ಮಧುಕುಮಾರ್‌ ಮತ್ತು ತಂಡದವರಿಂದ ಮಹದೇಶ್ವರರ ಗೀತೆ ಮತ್ತು ದೇವರ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗೀತ ಗಾಯನದ ವೇಳೆ ಭಕ್ತಾದಿಗಳೂ ಕೂಡ ಗೀತಗಾಯನಗಳನ್ನು ಹಾಡಿ ಕುಣಿತ ಹಾಕಿ ಸಂಭ್ರಮಿಸುತ್ತಿದ್ದುದು ಕಂಡುಬಂದಿತು. ಬಿಗಿ ಪೊಲೀಸ್‌ ಭದ್ರತೆ: ದೀಪಾವಳಿ ಜಾತ್ರಾ ಮಹೋತ್ಸವದ ಹಿನ್ನೆಲೆ ಮತ್ತು ಮಹಾರಥೋತ್ಸವದ ಹಿನ್ನೆಲೆ ಚಾಮರಾಜ ನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಾತ್ರಾ ಮಹೋತ್ಸವಕ್ಕಾಗಿ ಓರ್ವ ಡಿವೈಎಸ್ಪಿ, 6 ಇನ್ಸ್‌ಪೆಕ್ಟರ್‌, 14 ಸಬ್‌ಇನ್ಸ್ ಪೆಕ್ಟರ್, 25 ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌, 280 ಪೊಲೀಸ್‌ ಪೇದೆಗಳು, 200 ಗೃಹರಕ್ಷಕ ಸಿಬ್ಬಂದಿ, 3 ಜಿಲ್ಲಾ ಮೀಸಲು ಪಡೆ ಮತ್ತು 1 ಕೆಎಸ್‌ಆರ್‌ಪಿ ತುಕ್ಕಡಿಯನ್ನು ನಿಯೋಜಿಸಲಾಗಿತ್ತು. ‌

ಜರುಗದ ತೆಪ್ಪೋತ್ಸವ: ಪ್ರತಿ ಬಾರಿಯೂ ಮಹಾರಥೋತ್ಸವದ ದಿನದ ರಾತ್ರಿ ತೆಪ್ಪೋತ್ಸವ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವವನ್ನು ಸಂಪನ್ನ ಮಾಡ ಲಾಗುತಿತ್ತು. ಆದರೆ ಶ್ರೀ ಕ್ಷೇತ್ರದಲ್ಲಿ ದೊಡ್ಡ ಕೆರೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿರುವುದ ರಿಂದ ಈ ಬಾರಿಯೂ ತೆಪ್ಪೋತ್ಸವ ನಡೆಯಲಿಲ್ಲ. ಈ ವೇಳೆ ಆಕರ್ಷಕ ಬಾಣ ಬಿರುಸುಗಳ ಪ್ರದರ್ಶನ ನಡೆಸಲಾಗುತಿತ್ತು. ಆದರೆ ಈ ಬಾರಿಯೂ ತೆಪ್ಪೋತ್ಸವ ಜರುಗದ ಹಿನ್ನೆಲೆ ಕೆಲ ಭಕ್ತಾದಿಗಳಲ್ಲಿ ನಿರಾಸೆ ಉಂಟಾಗಿ‌ತ್ತು. ದೀಪಾವಳಿ ಜಾತ್ರಾ ಮಹೋತ್ಸವವು ಸಾಲೂರು ಬೃಹನ್ಮಠದ ಶಾಂತಮಲ್ಲಿ ಕಾರ್ಜುನ ಶ್ರೀಗಳ ಸಾರಥ್ಯ ದಲ್ಲಿ ಸುಸೂತ್ರವಾಗಿ ಜರುಗಿದೆ.

ಜಾತ್ರೆಯ ಯಶಸ್ಸಿಗೆ ಸಹಕರಿಸಿದ ಭಕ್ತವೃಂದ, ಪ್ರಾಧಿಕಾರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಮತ್ತು ಜಾತ್ರಾ ಮಹೋತ್ಸವಕ್ಕೆ ಸಹಕರಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳಿಗೂ ಧನ್ಯವಾದಗಳು. -ಸರಸ್ವತಿ, ಪ್ರಾಧಿಕಾರದ ಕಾರ್ಯದರ್ಶಿ

-ವಿನೋದ್‌ ಎನ್‌ ಗೌಡ

Advertisement

Udayavani is now on Telegram. Click here to join our channel and stay updated with the latest news.

Next