ಚಿಕ್ಕೋಡಿ: ಬೇಸಿಗೆಯಲ್ಲಿ ಕೃಷ್ಣಾ, ವೇಧಗಂಗಾ ಮತ್ತು ದೂಧಗಂಗಾ ನದಿಗೆ ನೀರು ಬಿಡಲು ಮಹಾರಾಷ್ಟ್ರ ರಾಜ್ಯದ ಜಲಸಂಪನ್ಮೂಲ ಸಚಿವ ಜಯಂತ ಪಾಟೀಲ ಅವರ ಜೊತೆ ಸಮಾಲೋಚಿಸಿದ್ದು, ಬೇಸಿಗೆಯಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ಅನುಕೂಲವಾಗಲು ಕೃಷ್ಣಾ ನದಿಗೆ ನೀರು ಹರಿಸುವ ಭರವಸೆ ನೀಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ನಿಪ್ಪಾಣಿ ತಾಲೂಕಿನ ಕೊಗನ್ನೋಳ್ಳಿ ಗ್ರಾಮದಲ್ಲಿ ಬೋರಗಾಂವನ ಅರಿಹಂತ ಸೌಹಾರ್ದ ಸಂಸ್ಥೆಯ ನೂತನ ಕಟ್ಟಡ ಉದ್ಘಾಟಿಸಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನನಗೆ ಸಿಕ್ಕಿರುವ ಜಲಸಂಪನ್ಮೂಲ ಖಾತೆಯ ಉಪಯೋಗ ಸಾಮಾನ್ಯ ರೈತನಿಗೂ ಆಗಬೇಕೆನ್ನುವ ಉದ್ದೇಶದಿಂದ ನಾನು ಈ ಖಾತೆ ಪಡೆದುಕೊಂಡಿದ್ದು, ಈ ಖಾತೆಯಲ್ಲಿ ಇರುವವರಿಗೂ ಪ್ರಾಮಾಣಿಕವಾಗಿ ಉತ್ತರ ಕರ್ನಾಟಕ ಹಾಗೂ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನ ಮಾಡಲಾಗುತ್ತದೆ ಎಂದರು.
ಚಿಕ್ಕೋಡಿ ತಾಲೂಕಿನ ಬಹುದಿನಗಳ ಬೇಡಿಕೆಯಾದ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಶೀಘ್ರವಾಗಿ ಪೂರ್ಣಗೊಳಿಸಲಾಗುತ್ತದೆ. ಈ ಭಾಗದ ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಶೇಷ ಮಹತ್ವ ನೀಡಲಾಗಿದೆ. ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ 18 ವಿಧಾನಸಭೆ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ನೀರಾವರಿ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ವಿಶ್ವವನ್ನೇ ಆತಂಕದ ಕೂಪಕ್ಕೆ ತಳ್ಳಿರುವ ಮಹಾಮಾರಿ ಕೊರೊನಾ ಸೋಂಕು ರಾಜ್ಯದಲ್ಲೂ ಭಯದ ವಾತಾವರಣ ಸೃಷ್ಟಿಸಿದ್ದು, ಸೋಂಕಿಗೆ ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಿದೆ. ನಾಗರಿಕರು ಸೋಂಕು ಬಗ್ಗೆ ಜಾಗೃತಿ ವಹಿಸಬೇಕು ಎಂದರು.
ಸಚಿವ ಶ್ರೀಮಂತ ಪಾಟೀಲ, ಸಹಕಾರ ಧುರೀಣ ರಾವಸಾಹೇಬ ಪಾಟೀಲ, ಶಾಸಕ ಗಣೇಶ ಹುಕ್ಕೇರಿ, ಮಹೇಶ ಕುಮಟಳ್ಳಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಅಭಿನಂದನ ಪಾಟೀಲ, ಮಾಜಿ ಶಾಸಕ ಸುಭಾಷ ಜೋಶಿ, ಲಕ್ಷ್ಮಣರಾವ ಚಿಂಗಳೆ, ಜಿಪಂ ಸದಸ್ಯ ರಾಜೇಂದ್ರ ಪವಾರ, ಅಮೋಲ ನಾಯಿಕ್, ಸುಜಯ ಪಾಟೀಲ, ಚಂದ್ರಕಾಂತ ಕೋಠಿವಾಲೆ, ವಿಶ್ವನಾಥ ಕಮತೆ, ಅಶೋಕಕುಮಾರ ಅಸೂದೆ,ರಾಜೇಶ ಕದಂ, ಮುಖಂಡ ಉತ್ತಮ ಪಾಟೀಲ ಸೇರಿದಂತೆ ಇತರರು ಇದ್ದರು. ಉತ್ತಮ ಪಾಟೀಲ ಸ್ವಾಗತಿಸಿದರು. ವಿಠಲ ಕೋಳೆಕರ ನಿರೂಪಿಸಿದರು. ಉಮೇಶ ಪಾಟೀಲ ವಂದಿಸಿದರು