ಮುಂಬಯಿ/ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಸೋಂಕಿನ ಸಮಸ್ಯೆಯ ನಡುವೆಯೇ ಕೇಂದ್ರ ಮತ್ತು ಕೆಲವು ರಾಜ್ಯಗಳ ನಡುವೆ “ಲಸಿಕೆ ಜಗಳ’ ಶುರುವಾಗಿದೆ. “ಲಸಿಕೆ ಕೊರತೆ ಯಾಗಿದೆ. ಹೆಚ್ಚುವರಿ ಡೋಸ್ ನೀಡಿ’ ಎಂದು ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳು ಮನವಿ ಮಾಡಿಕೊಂಡಿವೆ. ಎರಡು ರಾಜ್ಯಗಳ ಧೋರಣೆ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಹರ್ಷ ವರ್ಧನ್ ಕಟುವಾಗಿ ಆಕ್ಷೇಪ ಮಾಡಿದ್ದಾರೆ.
ಲಸಿಕೆ ನೀಡಿಕೆಯಲ್ಲಿ ಮತ್ತು ಕೊರೊನಾ ನಿಯಂತ್ರಣ ದಲ್ಲಿ ಕೆಲವು ರಾಜ್ಯಗಳು ನಿಗದಿತ ಗುರಿ ಸಾಧಿಸಿಲ್ಲ. ಈ ವೈಫಲ್ಯ ಮುಚ್ಚಿಕೊಳ್ಳಲು ಲಸಿಕೆಯ ಕೊರತೆ ಉಂಟಾಗಿದೆ ಎಂದು ಪುಕಾರು ಹುಟ್ಟಿಸಲಾಗುತ್ತಿದೆ. ಲಸಿಕೆ ಕೊರತೆ ಉಂಟಾಗಿದೆ ಎಂಬ ಅಂಶವೇ ಅಧಾರ ರಹಿತ ಎಂದು ಸಚಿವ ಹರ್ಷವರ್ಧನ್ ಬುಧವಾರ ತಿಳಿಸಿದ್ದಾರೆ.
“ಮಹಾರಾಷ್ಟ್ರದಲ್ಲಿ ಸರಿಯಾದ ರೀತಿಯಲ್ಲಿ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗುತ್ತಿಲ್ಲ. ಹೀಗಾಗಿಯೇ ಅಲ್ಲಿನ ಆರೋಗ್ಯ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ’ ಎಂದು ಕೇಂದ್ರ ಆರೋಗ್ಯ ಸಚಿವರು ಆರೋಪಿಸಿದ್ದಾರೆ. ಇಂಥ ಹೇಳಿಕೆ ಮೂಲಕ ರಾಜ್ಯವನ್ನು ಮತ್ತಷ್ಟು ಅಪಾಯದ ಸ್ಥಿತಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಆರೋಗ್ಯ ಕಾರ್ಯಕರ್ತರಿಗೇ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲಾಗಿಲ್ಲ ಎಂದಿದ್ದಾರೆ.
ಕರ್ನಾಟಕದಲ್ಲಿ ಸುಧಾರಣೆ ಬೇಕು: ಕರ್ನಾಟಕ, ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ಕೊರೊನಾ ಪತ್ತೆ ಮಾಡುವ ಪರೀಕ್ಷೆಗಳ ಗುಣಮಟ್ಟ ಮತ್ತಷ್ಟು ಬಲಗೊಳ್ಳಬೇಕು. ಪಂಜಾಬ್‌ನಲ್ಲಿಯೂ ಕೂಡ ಸೋಂಕಿನಿಂದ ಸಾವಿನ ಪ್ರಮಾಣ ಸುಧಾರಣೆಯಾಗ ಬೇಕಾಗಿದೆ ಎಂದು ಹೇಳಿದ್ದಾರೆ ಹರ್ಷವರ್ಧನ್.
ಅಗತ್ಯ ಇರುವವರಿಗೆ ಮೊದಲು: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕು ಎಂದು ಹೇಳಿಕೆ ನೀಡಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸಲಹೆಗೂ ಕೇಂದ್ರ ಸಚಿವರು ಆಕ್ಷೇಪಿಸಿದ್ದಾರೆ. ಅಗತ್ಯ ಇರುವ ಗುಂಪುಗಳಿಗೆ ಮೊದಲು ಲಸಿಕೆ ನೀಡುವುದೇ ಕೇಂದ್ರದ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ. ಸಾವಿನ ಪ್ರಮಾಣ ತಗ್ಗಿಸುವುದೇ ಲಸಿಕೆ ನೀಡಿಕೆ ಉದ್ದೇಶ ಎಂದಿದ್ದಾರೆ ಹರ್ಷವರ್ಧನ್.
ಮಹಾರಾಷ್ಟ್ರ ಸಚಿವರು ಹೇಳಿದ್ದೇನು?: ಮಹಾರಾಷ್ಟ್ರದಲ್ಲಿ 14 ಲಕ್ಷ ಡೋಸ್‌ಗಳು ಮಾತ್ರ ಉಳಿದಿವೆ. ಅವುಗಳನ್ನು ಇನ್ನು ಮೂರು ದಿನಗಳಿಗೆ ಮಾತ್ರ ಬಳಕೆ ಮಾಡಬಹುದು ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದರು. ಹೀಗಾಗಿ ರಾಜ್ಯದಲ್ಲಿನ ಲಸಿಕಾ ಕೇಂದ್ರಗಳನ್ನು ಮುಚ್ಚುವ ಅನಿವಾರ್ಯ ಸ್ಥಿತಿ ಉಂಟಾಗಿದೆ. ಕೇಂದ್ರಕ್ಕೆ ಲಸಿಕೆ ಗಾಗಿ ಬರುವ ಜನರನ್ನು ವಾಪಸ್ ಕಳುಹಿಸಬೇಕಾಗಿದೆ ಎಂದು ಹೇಳಿಕೆ ನೀಡಿದ್ದರು. ಬೃಹನ್ಮುಂಬಯಿ ಪಾಲಿಕೆ ಮೇಯರ್ ಕೂಡ ಲಸಿಕೆ ಕೊರತೆ ಬಗ್ಗೆ ಮಾತನಾಡಿದ್ದರು.