ಮುಂಬಯಿ: ಮಹಾರಾಷ್ಟ್ರ ದ ಏಕನಾಥ್ ಶಿಂಧೆ ಸರಕಾರಕ್ಕೆ ಬೆಂಬಲ ಸೂಚಿಸಿ ಡಿಸಿಎಂ ಆಗಿದ್ದ ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರಿಗೆ ಪ್ರಬಲ ಖಾತೆಗಳನ್ನು ನೀಡಲಾಗಿದ್ದು, ಹಣಕಾಸು ಮತ್ತು ಯೋಜನಾ ವಿಭಾಗವನ್ನು ಅವರು ನಿಭಾಯಿಸಲಿದ್ದಾರೆ.
ಅಜಿತ್ ಪವಾರ್ ಮತ್ತು ಎಂಟು ಮಂದಿ ಎನ್ ಸಿಪಿ ಶಾಸಕರು ಸರಕಾರಕ್ಕೆ ಬೆಂಬಲ ಸೂಚಿಸಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎರಡು ವಾರಗಳ ನಂತರ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಎನ್ ಸಿಪಿಯ ಇನ್ನೋರ್ವ ಹಿರಿಯ ನಾಯಕ ಛಗನ್ ಭುಜಬಲ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ನೀಡಲಾಗಿದೆ. ಸಂಪುಟ ಸಚಿವ ಅನಿಲ್ ಪಾಟೀಲ್ ಅವರಿಗೆ ಪರಿಹಾರ ಮತ್ತು ಪುನರ್ವಸತಿ, ವಿಪತ್ತು ನಿರ್ವಹಣಾ ಇಲಾಖೆ, ಅದಿತಿ ಸುನೀಲ್ ತಟ್ಕರೆ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಧನಂಜಯ್ ಮುಂಡೆ ಅವರಿಗೆ ಕೃಷಿ, ದಿಲೀಪ್ ವಾಲ್ಸೆ ಪಾಟೀಲ್ ಅವರಿಗೆ ಆದಾಯ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಮಹಾರಾಷ್ಟ್ರ ಸರಕಾರದ ಕ್ಯಾಬಿನೆಟ್ ನಲ್ಲಿ ಈಗ ಮುಖ್ಯಮಂತ್ರಿ ಮತ್ತು ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೊರತುಪಡಿಸಿ, ಬಿಜೆಪಿಯ ಒಂಬತ್ತು ಸಚಿವರು, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯಿಂದ ಒಂಬತ್ತು ಮತ್ತು ಎನ್‌ಸಿಪಿಯಿಂದ ಒಂಬತ್ತು ಪ್ರತಿನಿಧಿಗಳನ್ನು ಹೊಂದಿದೆ. ಗರಿಷ್ಠ 43 ಸಚಿವರನ್ನು ಹೊಂದಬಹುದಾಗಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗಿನ ಸಭೆಗಳಲ್ಲಿ ತಮ್ಮ ಶಾಸಕರಿಗೆ ಪ್ರಮುಖ ಖಾತೆಗಳಿಗಾಗಿ ಲಾಬಿ ಮಾಡಿದ ಅಜಿತ್ ಪವಾರ್‌ಗೆ ಹಣಕಾಸು ಖಾತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.