ಮುಂಬೈ: ಮಹಾವಿಕಾಸ್ ಅಘಡಿ (ಎಂವಿಎ) ಸರ್ಕಾರವನ್ನು ಇಡಿ, ಸಿಬಿಐ ತನಿಖೆಗಳಿಂದ ಬೆದರಿಸಲಾಗುವುದಿಲ್ಲ ಎಂದು ಸಿಎಂ ಉದ್ಧವ್ ಠಾಕ್ರೆ, ಬಿಜೆಪಿ ವಿರುದ್ಧ ನೇರವಾಗಿ ಹರಿಹಾಯ್ದಿದ್ದಾರೆ.
ಮಹಾರಾಷ್ಟ್ರದಲ್ಲಿ ಎಂವಿಎ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಉದ್ಧವ್, “ಸಾಮ್ನಾ’ ಸಂಪಾದಕರೂ ಆಗಿರುವ ಶಿವಸೇನಾ ಸಂಸದ ಸಂಜಯ್ ರಾವತ್ ಜತೆಗಿನ ಸಂದರ್ಶನದಲ್ಲಿ ಈ ಮಾತುಗಳನ್ನಾಡಿದ್ದಾರೆ.
“ಎಂವಿಎ ಸರ್ಕಾರ, ಮಹಾರಾಷ್ಟ್ರದ ಜನತೆಯ ಆಶೀರ್ವಾದದ ಫಲ. ಇದನ್ನು ಯಾವ ತನಿಖೆಗಳು, ದಾಳಿಗಳಿಂದಲೂ ಬೆದರಿಸಲಾಗದು. ರಾಜ್ಯದಲ್ಲಿ ಬಿಜೆಪಿ ರಾಜಕೀಯ ಹಗೆತನ ಸಾಧಿಸುವುದರಲ್ಲಿ ತಲ್ಲೀನವಾಗಿದೆ. ಇಂಥ ದ್ವೇಷ ರಾಜಕಾರಣಕ್ಕೆ ಯಾವತ್ತೂ ಕೊನೆಯೆಂಬುದಿಲ್ಲ. ಈ ಹಾದಿಯಲ್ಲಿ ಸಾಗಲು ನಮ್ಮಿಂದಾಗುವುದಿಲ್ಲ. ಬಿಜೆಪಿ ಈ ಬಗೆಯ ರಾಜಕೀಯ ವಿಕೃತತೆಯನ್ನು ನಿಲ್ಲಿಸಬೇಕು’ ಎಂದು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ:ದುರಂತ ಅಂತ್ಯ ಕಂಡ ಫಿಲಿಪ್ ಹ್ಯೂಸ್‌ಗೆ ಉಭಯ ತಂಡಗಳಿಂದ ಗೌರವ
ಕಪ್ಪುಹಣ ದಂಧೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತಂಡ, ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಈ ಘಟನೆ ನಡೆದ ಮರುದಿನವೇ ಉದ್ಧವ್ “ಸಾಮ್ನಾ’ಗೆ ಸಂದರ್ಶನ ನೀಡಿದ್ದಾರೆ.