ನವದೆಹಲಿ : ಕಳೆದ ನಾಲ್ಕು ದಿನಗಳಿಂದ ಪ್ರತಿ ನಿತ್ಯ ಭಾರತದಲ್ಲಿ 3 ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇದೇ ಹಿನ್ನೆಯಲ್ಲಿ ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದ ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡಲು ನಿರ್ಧರಿಸಿದೆ. ಈ ಬಗ್ಗೆ ಸಚಿವ ನವಾಬ್ ಮಲ್ಲಿಕ್ ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಸಚಿವ ಸಂಪುಟದೊಂದಿಗೆ ಚರ್ಚೆ ಮಾಡಿದ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯವು ದೇಶದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವ ರಾಜ್ಯ ಎಂದು ಕರೆಸಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಪ್ರತಿ ದಿನ ಸುಮಾರು 60,000 ಸಾವಿರ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ.
ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಆದಿತ್ಯ ಠಾಕ್ರೆ ಈ ಬಗ್ಗೆ ಮಾತನಾಡಿದ್ದು, ಕೋವಿಡ್ 3ನೇ ಅಲೆ ಸದ್ಯದಲ್ಲಿ ಅಪ್ಪಳಿಸಲಿದೆ. ಅದು ಬಲಿಷ್ಠವಾಗಿದೆಯೋ ಅಥವಾ ದುರ್ಬಲವಾಗಿದೆಯೋ ನಂತರ ಗೊತ್ತಾಗಲಿದೆ. ಆದ್ರೆ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಿ. ಲಸಿಕೆ ಹಾಕಿಸಿಕೊಂಡರೆ ತಕ್ಷಣ ಸಹಾಯಕ್ಕೆ ಬರುವುದಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಕೋವಿಡ್ ಲಸಿಕೆ ನಿಮ್ಮನ್ನು ರಕ್ಷಿಸುತ್ತದೆ ಎಂದು ಆದಿತ್ಯ ಹೇಳಿದ್ದಾರೆ.
ಪ್ರಮುಖರ ಜೊತೆ ಸಭೆ ನಡೆಸಿರುವ ನರೇಂದ್ರ ಮೋದಿ ಕೂಡ ಕೋವಿಡ್ ಲಸಿಕೆ ಬಗ್ಗೆ ಒತ್ತಿ ಹೇಳಿದ್ದಾರೆ. ಕೋವಿಡ್ ತಡೆಯಲು ಲಸಿಕೆ ಬಹಳ ಪ್ರಬಲವಾದ ಅಸ್ತ್ರ ಎಂದು ತಿಳಿಸಿದ್ದಾರೆ. ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಘೋಷಣೆ ಮಾಡಿದ್ದು, ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸಿದೆ.