ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ 19 ಅಟ್ಟಹಾಸ ಮುಂದುವರೆದಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 6427 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಅದರಲ್ಲೂ ಗುರುವಾರ ಒಂದೇ ದಿನ 778 ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಮಾತ್ರವಲ್ಲದೇ ಒಂದೇ ದಿನ 14 ಕೋವಿಡ್ 19 ವೈರಸ್ ಸೋಂಕಿತರು ಸಾವನ್ನಪ್ಪಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಗುರುವಾರ ರಾಜ್ಯದಲ್ಲಿ ಪತ್ತೆಯಾಗಿರುವ 778 ಸೋಂಕು ಪ್ರಕರಣಗಳಲ್ಲಿ 552 ಹೊಸ ಸೋಂಕು ಪ್ರಕರಣಗಳು ಮುಂಬಯಿ ನಗರವೊಂದರಲ್ಲೇ ದಾಖಲಾಗಿದೆ. ಈ ಮೂಲಕ ಮುಂಬಯಿ ನಗರವೊಂದರಲ್ಲೇ 4,205 ಕೋವಿಡ್ ಪಾಸಿಟಿವ್ ಪ್ರಕರಗಳು ಪತ್ತೆಯಾದಂತಾಗಿದೆ. ಇನ್ನು ವಾಣಿಜ್ಯ ನಗರಿಯಲ್ಲಿ ಈ ಮಹಾಮಾರಿಗೆ ಈಗಾಗಲೇ 167 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ ರಾಜ್ಯದಲ್ಲಿ ಇದುವರೆಗೂ 840 ಕೋವಿಡ್ ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಹೊಂದಿದ್ದಾರೆ.
ಇನ್ನು ದೇಶದಲ್ಲಿ ಗುರುವಾರದವರೆಗೆ ಒಟ್ಟು 21,700 ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಮತ್ತು ದೇಶದೆಲ್ಲೆಡೆ ಈ ಮಹಾಮಾರಿ ವೈರಾಣು 686 ಜನರ ಸಾವಿಗೆ ಕಾರಣವಾಗಿದೆ. ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 1,229 ಕೋವಿಡ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ ಎಂಬ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡಿದೆ.
ಬುಧವಾರದಿಂದ ಈಚೆಗೆ ದೇಶದಲ್ಲಿ ಕನಿಷ್ಟ 34 ಕೋವಿಡ್ ಸಂಬಂಧಿತ ಸಾವುಗಳು ಸಂಭವಿಸಿದೆ. ಮಹಾರಾಷ್ಟ್ರದ ಬಳಿಕ ಗುಜರಾತ್ ಮತ್ತು ದೆಹಲಿ ಕೋವಿಡ್ ವೈರಸ್ ಹೊಡೆತಕ್ಕೆ ತತ್ತರಿಸುತ್ತಿರುವ ಪ್ರಮುಖ ರಾಜ್ಯಗಳಾಗಿವೆ.