ಮುಂಬಯಿ : ಮಹಾರಾಷ್ಟ್ರ ಸರಕಾರ ರಾಜ್ಯಾದ್ಯಂತ ಹೇರಿರುವ ಪ್ಲಾಸ್ಟಿಕ್ ನಿಷೇಧ ಇಂದು ಶನಿವಾರದಿಂದ ಜಾರಿಗೆ ಬಂದಿದೆ.
ಹಾಗಾಗಿ ಯಾವುದೇ ಬಗೆಯ ಪ್ಲಾಸ್ಟಿಕ್ ವಸ್ತುಗಳನ್ನು, ಕ್ಯಾರಿ ಬ್ಯಾಗ್ ಅಥವಾ ಥರ್ಮಕೋಲ್‌ಗಳನ್ನು ಜನರು ಬಳಸುವಂತಿಲ್ಲ.
ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಅಪರಾಧ ಎಸಗುವವರಿಗೆ 5,000 ರೂ. ದಂಡ ಇದೆ; ಎರಡನೇ ಬಾರಿ ಅಪರಾಧ ಎಸಗುವವರಿಗೆ 10,000 ರೂ. ದಂಡ ಇದೆ. ಮೂರನೇ ಬಾರಿ ಅಪರಾಧ ಎಸಗುವವರಿಗೆ 25,000 ರೂ. ದಂಡ ಮತ್ತು ಮೂರು ತಿಂಗಳ ಜೈಲು ಶಿಕ್ಷೆ ಇದೆ.
ಎಲ್ಲ ಹಿತಾಸಕ್ತಿದಾರರು ಈ ಕ್ರಮವನ್ನು ಬೆಂಬಲಿಸಿದರೆ ಮಾತ್ರವೇ ಪ್ಲಾಸ್ಟಿಕ್ ನಿಷೇಧ ರಾಜ್ಯದಲ್ಲಿ ಪರಿಪೂರ್ಣವಾಗಿ ಯಶಸ್ವಿಯಾದೀತು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
“ಯಾವ ಬಗೆಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಲಾಗದೋ, ನಿಯಂತ್ರಿಸಲಾಗದೋ, ಪುನರ್ ಬಳಕೆ ಮಾಡಲಾಗದೋ ಅಂಥವುಗಳನ್ನು ನಾವು ನಿಷೇಧಿಸಿದ್ದೇವೆ; ಆದುದರಿಂದ ಹೊಣೆಯರಿತ ಪ್ಲಾಸ್ಟಿಕ್ ಬಳಕೆಯನ್ನು ನಾವು ಉತ್ತೇಜಿಸುತ್ತಿದ್ದೇವೆ’ ಎಂದು ಫಡ್ನವೀಸ್ ಹೇಳಿದರು.
ಪ್ಲಾಸ್ಟಿಕ್ ನಿಷೇಧದಿಂದಾಗಿ ಈಗ ಪರಿಸರ ಹಾಳುಮಾಡುವವರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಇದೇ ವೇಳೆ ವ್ಯಾಪಾರ ವಹಿವಾಟುದಾರರಿಗೆ ಸ್ವಲ್ಪ ಮಟ್ಟಿನ ರಿಯಾಯಿತಿ ನೀಡಲಾಗಿದೆ. ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬದಲಿಗೆ ಬಳಸಬಹುದಾದ ವಸ್ತುಗಳು ದೊಡ್ಡ ಮಟ್ಟದಲ್ಲಿ ಬಳಕೆಗೆ ಬರುವ ತನಕ ವ್ಯಾಪಾರಸ್ಥರಿಗೆ ಹಾನಿ ಆಗದಿರಲೆಂದು ರಿಯಾಯಿತಿ ತೋರಿಸಲಾಗಿದೆ ಎಂದು ಫಡ್ನವೀಸ್ ಹೇಳಿದರು.