ಬೆಂಗಳೂರು/ಹುಬ್ಬಳ್ಳಿ: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತರ ಕರ್ನಾಟಕದಲ್ಲಿ ನೆರೆ ಭೀತಿ ಎದುರಾಗಿದೆ. ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ನಾಲ್ಕು ಸೇತುವೆಗಳು ಮುಳುಗಡೆಯಾಗಿವೆ. ಉತ್ತರ ಕನ್ನಡ ಜಿಲ್ಲೆಯ 5 ತಾಲೂಕಿನ ಶಾಲಾ-ಕಾಲೇಜುಗಳಿಗೆ ಜು. 8ರಂದು ರಜೆ ಘೋಷಿಸಲಾಗಿದೆ.
ಮಹಾರಾಷ್ಟ್ರದ ಕೊಂಕಣ ಭಾಗದ ಕೋಯ್ನಾ, ನವಜಾ, ಮಹಾಬಳೇಶ್ವರ, ಕಾಳಮ್ಮವಾಡಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿ ನೀರಿನ ಮಟ್ಟದಲ್ಲಿ ಎರಡು ಅಡಿಗಳಷ್ಟು ಹೆಚ್ಚಳವಾಗಿದೆ.
ಕೃಷ್ಣಾ ನದಿಗೆ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ ಮೂಲಕ 37 ಸಾವಿರ ಕ್ಯುಸೆಕ್ ಹಾಗೂ ದೂಧಗಂಗಾ ನದಿ ಮೂಲಕ 10 ಸಾವಿರ ಕ್ಯುಸೆಕ್ ಸೇರಿ ಒಟ್ಟು 47 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನದಿಗಳ ಮಟ್ಟದಲ್ಲಿ ಹೆಚ್ಚಳವಾಗಿದೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕುನ್ನೂರ-ಬಾರವಾಡ, ಕನ್ನೂರ-ಭೋಜವಾಡಿ, ಕಾರದಗಾ-ಭೋಜ, ಮಾಂಜರಿ-ಬಾವನ ಸವದತ್ತಿ ಸೇತುವೆಗಳು ಜಲಾವೃತಗೊಂಡಿವೆ.
ಮಲೆನಾಡಿನಲ್ಲೂ ಪುನರ್ವಸು ಮಳೆ ಅಬ್ಬರದಿಂದ ತುಂಗಾ, ಭದ್ರಾ, ಹೇಮಾವತಿ, ಅಘನಾಶಿನಿ, ಶರಾವತಿ, ಚಂಡಿಕಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತೀರ ಪ್ರದೇಶದಲ್ಲಿ ನೆರೆ ಭೀತಿ ಆವರಿಸಿದೆ. ಶೃಂಗೇರಿ ತಾಲೂಕಿನ ವಿವಿಧೆಡೆ ಭೂಕುಸಿತ ಮುಂದುವರಿದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಶರಾವತಿ, ಮಾಣಿ, ವಾರಾಹಿ, ಸಾವೆಹಕ್ಲು ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದೆ.