ಜಲಗಾಂವ್: ನವೆಂಬರ್ 20 ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಜಲ್ಗಾಂವ್ನಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಪರ ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮ ರವಿವಾರ(ನ17) ಪ್ರಚಾರ ನಡೆಸಿದರು. ಕಾಂಗ್ರೆಸ್ನವರು “ಜೂಟ್ ಮತ್ತು ಲೂಟಿ” ರಾಜಕೀಯವನ್ನು ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
ರಾಜಸ್ಥಾನಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಶರ್ಮ, ಮಹಾಯುತಿಗೆ ಮತ ಚಲಾಯಿಸುವ ಮೂಲಕ ಮತ್ತು ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸುವ ಮೂಲಕ ತಮ್ಮ ಕರ್ಮಭೂಮಿಗಾಗಿ(ಮಹಾರಾಷ್ಟ್ರ) ಜವಾಬ್ದಾರಿಯನ್ನು ಪೂರೈಸುವಂತೆ ಕೇಳಿಕೊಂಡರು.
ರಾಜಸ್ಥಾನಿ ಸಮುದಾಯವು ಶತಮಾನಗಳ ಹಿಂದೆ ಇಲ್ಲಿಗೆ ವಲಸೆ ಬಂದು ಕಠಿನ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಹೆಸರು ಮಾಡಿದೆ. ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಮಹಾರಾಣಾ ಪ್ರತಾಪ್ ಅವರು ದೇಶದ ಹೆಮ್ಮೆ ಮತ್ತು ಗೌರವವನ್ನು ಪ್ರತಿನಿಧಿಸುವುದರಿಂದ ರಾಜಸ್ಥಾನ ಮತ್ತು ಮಹಾರಾಷ್ಟ್ರವು ಆಳವಾದ ಸಂಬಂಧವನ್ನು ಹೊಂದಿದೆ ಎಂದರು.
“ರಾಜಸ್ಥಾನಿಗಳು ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ನಾಕ್ಷತ್ರಿಕ ಕೊಡುಗೆ ನೀಡುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಒಬ್ಬ ಮಾರ್ವಾಡಿ ಸಾಮಾಜಿಕ ಕಾರ್ಯಗಳ ಮೂಲಕ ಅಭಿವೃದ್ಧಿಪಡಿಸಿದ ಸಂಪರ್ಕದಿಂದಾಗಿ 1000 ಜನರ ಮೇಲೆ ಪ್ರಭಾವ ಬೀರಬಹುದು, ”ಎಂದು ಶರ್ಮ ಹೇಳಿದರು.
ನರೇಂದ್ರ ಮೋದಿ ಸರಕಾರವನ್ನು ಶ್ಲಾಘಿಸಿ, ಬಡವರ ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಯೋಜನೆಗಳೊಂದಿಗೆ ದೇಶವು 2014 ರಿಂದ ಅದ್ಭುತ ಪ್ರಗತಿಯನ್ನು ಕಂಡಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ಜಾರಿಯಲ್ಲಿದೆ. ಭಾರತದ ಜಾಗತಿಕ ನಿಲುವು ಹೆಚ್ಚಿದೆ ಮತ್ತು ಭಯೋತ್ಪಾದನೆ ಕೊನೆಗೊಂಡಿದೆ, ”ಎಂದರು.
ಕಳೆದ 11 ತಿಂಗಳಲ್ಲಿ ತಮ್ಮ ಸರ್ಕಾರವು ವಿಧಾನಸಭೆ ಚುನಾವಣೆಯ ಸಮಯದಲ್ಲಿ ನಾಗರಿಕರಿಗೆ ನೀಡಿದ ಭರವಸೆಗಳಲ್ಲಿ 50 ಪ್ರತಿಶತವನ್ನು ಪೂರ್ಣಗೊಳಿಸಿದೆ ಎಂದು ರಾಜಸ್ಥಾನ ಸಿಎಂ ಹೇಳಿದರು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.