ಮುಂಬಯಿ: ಮಹಾರಾಷ್ಟ್ರ ವಿಧಾನಸಭಾ ಅವಧಿ ನಾಳೆಗೆ (ಶುಕ್ರವಾರ) ಮುಕ್ತಾಯವಾಗಲಿದ್ದು, ಸರಕಾರ ರಚನೆ ಸಸ್ಪೆನ್ಸ್ ಮುಂದುವರಿದಿದೆ. ದಿನದಿಂದ ದಿನಕ್ಕೆ ಬಿಜೆಪಿ ಹಾಗೂ ಶಿವಸೇನೆ ಪಟ್ಟುಗಳು ಬಿಗಿಯಾಗುತ್ತಿದ್ದು, ಯಾವ ರೀತಿ ತಾರ್ಕಿಕ ಅಂತ್ಯ ಕಾಣುತ್ತದೆ ಎಂಬ ಬಗ್ಗೆ ಒಂದೆರಡು ದಿನದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.
ಎನ್‌ಸಿಪಿ ಜತೆ ಸೇರಿ ಕಾಂಗ್ರೆಸ್ ಬಾಹ್ಯ ಬೆಂಬಲದೊಂದಿಗೆ ಶಿವಸೇನೆ ಸರಕಾರ ರಚಿಸುವ ಸಾಧ್ಯತೆಯನ್ನು ಎನ್‌ಸಿಪಿ ನೇತಾರ ಶರದ್ ಪವಾರ್ ಅಲ್ಲಗಳೆದಿದ್ದಾರೆ. ನಮಗೆ ಸಂಖ್ಯಾಬಲವಿಲ್ಲ, ವಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇವೆ. ಬಹುಮತವಿರುವ ಬಿಜೆಪಿ-ಸೇನೆ ಮೈತ್ರಿಯೇ ಸರಕಾರ ರಚಿಸಲಿ ಎಂದು ಬುಧವಾರ ಪುನರುಚ್ಚರಿಸಿದ್ದಾರೆ. ಅಲ್ಲದೇ, ಬಹುಮತವಿಲ್ಲದಿದ್ದರೂ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಕೌಶಲ್ಯ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಇದೆ. ಇಲ್ಲೂ ಕೂಡ ನಾವು ಅದನ್ನೇ ಎದುರು ನೋಡುತ್ತಿದ್ದೇವೆ ಎಂದು ಟಾಂಗ್ ನೀಡಿದ್ದಾರೆ.
ಇದೀಗ ರಾಜ್ಯದಲ್ಲಿ ಉಳಿದಿರುವುದು 2 ಆಯ್ಕೆಗಳು ಮಾತ್ರ. ಬಿಜೆಪಿ ಹಾಗೂ ಶಿವಸೇನೆ ಹೊಂದಾಣಿಕೆ ಮಾಡಿಕೊಂಡು ಸರಕಾರ ರಚಿಸುವುದು ಇಲ್ಲವೇ ಶಿವಸೇನೆಯನ್ನು ಇಬ್ಭಾಗ ಮಾಡಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು. ವಿಧಾನಸಭೆ ಅವಧಿ ಮುಗಿದರೆ ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಅವಕಾಶವಿದ್ದರೂ ಇದು ಕಷ್ಟಸಾಧ್ಯ.
ಶಿವಸೇನೆಯ ಸಿಎಂ ಪಟ್ಟು: ಚುನಾವಣೆ ಪೂರ್ವದಲ್ಲಿ ಒಪ್ಪಂದದಂತೆ ಶಿವಸೇನೆ ಅಭ್ಯರ್ಥಿಯೇ ಮುಖ್ಯಮಂತಿಯಾಗಲಿದ್ದಾರೆ. ಇದೇ ನಮ್ಮ ನಿರ್ಧಾರ. ಇದನ್ನು ಹೊರತುಪಡಿಸಿದರೆ ನಮ್ಮಿಂದ ಅಥವಾ ಅವರಿಂದ (ಬಿಜೆಪಿ) ಯಾವುದೇ ಹೊಸ ಪ್ರಸ್ತಾವನೆ ಇಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ತಿಳಿಸಿದ್ದಾರೆ. ರಾವತ್ ಅವರು ಎನ್‌ಸಿಪಿ ವರಷ್ಠ ಶರದ್ ಪವಾರ್‌ರನ್ನು ಬುಧವಾರ ಭೇಟಿಯಾಗಿದ್ದು, ಸಂಚಲನ ಮೂಡಿಸಿತ್ತು. ಇದೀಗ ಪವಾರ್ ಅವರೇ ಸ್ಪಷ್ಟನೆ ನೀಡಿರುವುದರಿಂದ ಹೊಸ ರಾಜಕೀಯ ವಿದ್ಯಮಾನ ಸಂಭವಿಸುವ ಯಾವುದೇ ನಿರೀಕ್ಷೆಗಳು ಇಲ್ಲ.
ಗಡ್ಕರಿ-ಅಹ್ಮದ್ ಪಟೇಲ್ ಭೇಟಿ: ಏತನ್ಮಧ್ಯೆ, ಹೊಸದಿಲ್ಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಅಹ್ಮದ್ ಪಟೇಲ್ ಭೇಟಿಯಾಗಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪವಾರ್, ಈ ಭೇಟಿಯು ರಸ್ತೆ ಸಾರಿಗೆಯ ಕೆಲಸಗಳಿಗೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯಪಾಲರ ಭೇಟಿ ಇಂದು
ಫಲಿತಾಂಶ ಬಂದು 13 ದಿನಗಳಾಗಿದ್ದು, ಶುಕ್ರವಾರಕ್ಕೆ ವಿಧಾನಸಭೆ ಅವಧಿ ಪೂರ್ಣಗೊಳ್ಳಲಿದೆ. ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಯ ನಿಯೋಗ ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಲಿದೆ. ಇಲ್ಲಿ ಯಾವ ವಿಷಯಗಳನ್ನು ಪ್ರಸ್ತಾವಿಸುತ್ತದೆ ಎಂಬುದು ತಿಳಿದು ಬಂದಿಲ್ಲ. ಸರಕಾರ ರಚನೆಗೆ ಅವಕಾಶ ಕೇಳುವುದು ಇಲ್ಲವೇ ಕಾಲಾವಕಾಶ ನೀಡುವಂತೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.