Advertisement

ನೇರ ನಡೆ ನುಡಿಯ ನಾಯಕ ಅಜಿತ್‌

09:52 AM Nov 25, 2019 | Hari Prasad |

ಪೂನಾ ಜಿಲ್ಲೆಯ ಅತಿ ಹೆಚ್ಚು ಹಳ್ಳಿಗಳಿರುವ ವಿಧಾನಸಭಾ ಕ್ಷೇತ್ರದಲ್ಲಿ ಬಾರಾಮತಿಯೂ ಒಂದು. ಈಗ, ಬಿಜೆಪಿ ಜತೆಗೆ, ಕೈ ಜೋಡಿಸುವ ಮೂಲಕ ತಮ್ಮ ರಾಜಕೀಯ ಜೀವನದಲ್ಲಿ 3ನೇ ಬಾರಿಗೆ ಉಪ ಮುಖ್ಯಮಂತ್ರಿಯಾಗುತ್ತಿರುವ ಎನ್‌ಸಿಪಿಯ ಅಜಿತ್‌ ಪವಾರ್‌ (60), ಆ ಕ್ಷೇತ್ರದ ಶಾಸಕ. ಅಷ್ಟೇ ಅಲ್ಲ, ಆ ಪ್ರಾಂತ್ಯದಲ್ಲೇ ಬಹು ಜನಪ್ರಿಯ ನಾಯಕ. ದಿಟ್ಟ ಆಡಳಿತಗಾರ ಹಾಗೂ ನೇರ ನಡೆ-ನುಡಿಗೆ ಹೆಸರಾಗಿರುವ ಅಜಿತ್‌ ಪವಾರ್‌ ಅವರನ್ನು ಆ ಭಾಗದ ಜನರು ಪ್ರೀತಿಯಿಂದ ‘ದಾದಾ’ ಅಂತಲೇ ಕರೆಯುತ್ತಾರೆ. 80ರ ದಶಕದಿಂದ ತಮ್ಮ ಚಿಕ್ಕಪ್ಪ ಶರದ್‌ ಪವಾರ್‌ರವರ ಗರಡಿಯಲ್ಲೇ ಬೇರುಮಟ್ಟದಿಂದ ಬೆಳೆದು ಬಂದಿದ್ದ ಅವರು ತಮ್ಮ ಸ್ವಂತ ಬಲದಿಂದಲೇ ಎನ್‌ಸಿಪಿಯ ಪ್ರಭಾವಿ ನಾಯಕರಾಗಿ ಬೆಳೆದು ಬಂದವರು.

Advertisement

ರಾಜಕೀಯ ಜೀವನ: 1991ರಲ್ಲಿ ಬಾರಾಮತಿಯಲ್ಲಿ ಜಯ ಸಾಧಿಸುವ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಅವರು, ಆನಂತರ 1995, 1999, 2004, 2009 ಹಾಗೂ 2019ರ ಚುನಾವಣೆಗಳಲ್ಲಿ ಅದೇ ಕ್ಷೇತ್ರದಿಂದ ಜಯ ಸಾಧಿಸಿದ್ದಾರೆ. 2010ರಲ್ಲಿ 2012ರಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌-ಎನ್‌ಸಿಪಿ ಸರಕಾರಗಳಿದ್ದಾಗ ಉಪಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ್ದರು.

2002ರಲ್ಲಿ ಮಹಾರಾಷ್ಟ್ರದ ನೀರಾವರಿ ಸಚಿವರಾಗಿದ್ದಾಗ, ಮಹಾರಾಷ್ಟ್ರ ಕೃಷ್ಣ ಕಣಿವೆ ಅಭಿವೃದ್ಧಿ ಕಾರ್ಪೊರೇಷನ್‌ (ಎಂಕೆವಿಡಿಸಿ), ಲಾಸಾವಾ ಎಂಬ ಖಾಸಗಿ ಸಂಸ್ಥೆಗೆ 141.5 ಹೆಕ್ಟೇರ್‌ಗಳಷ್ಟು ಭೂಮಿಯನ್ನು ಅಂದಿನ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ನೀಡಲಾಗಿದೆ ಎಂಬ ಆರೋಪ ಅವರ ಮೇಲಿದೆ.

ಬಿಜೆಪಿ ಶಕುನಿ, ಅಜಿತ್‌ದುರ್ಯೋಧನ
ಮಹಾರಾಷ್ಟ್ರದಲ್ಲಿನ ಬೆಳವಣಿಗೆ ದೇಶದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಮತ್ತು ಬಿಜೆಪಿ ಪ್ರಜಾಪ್ರಭುತ್ವದ ಗುತ್ತಿಗೆ ಕೊಲೆಗಾರ ಎಂದು ಹೊಸದಿಲ್ಲಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ರಣದೀಪ್‌ ಸುರ್ಜೇವಾಲಾ ದೂರಿದ್ದಾರೆ. ಅಜಿತ್‌ ಪವಾರ್‌ ಅವಕಾಶವಾದಿ ವ್ಯಕ್ತಿ ಎಂದು ಆರೋಪಿಸಿದರು. ಬಿಜೆಪಿ ಮತ್ತು ಅಜಿತ್‌ ಪವಾರ್‌ ದುರ್ಯೋಧನ ಮತ್ತು ಶಕುನಿಯರಂತೆ ವರ್ತಿಸಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ ಮುಂಬಯಿನಲ್ಲಿ ಮಾತನಾಡಿದ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ – ಎನ್‌ಸಿಪಿ ಸರಕಾರ ವಿಶ್ವಾಸ ಮತಕೋರುವ ವೇಳೆ ಅವರನ್ನು ಸೋಲಿಸುತ್ತೇವೆ ಎಂದರು. ಏಕಾಏಕಿ ಅಜಿತ್‌ ಪವಾರ್‌ ಬಿಜೆಪಿ ಜತೆ ಸೇರಿ ಸರಕಾರ ರಚಿಸಿದ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರ ರಚಿಸಿರುವುದು ಸಾಂವಿಧಾನಿಕವಾಗಿಲ್ಲ. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ ಎಂದು ದೂರಿದ್ದಾರೆ.

Advertisement

ಮೈತ್ರಿ ಸರಕಾರ ರಚನೆಯಲ್ಲಿ ನಮ್ಮ ಕಡೆಯಿಂದ ಯಾವುದೇ ಲೋಪ ಆಗಿಲ್ಲ. ದೀರ್ಘ‌ ಸಮಯವನ್ನೂ ತೆಗೆದುಕೊಂಡಿಲ್ಲ. ಬಿಜೆಪಿ ಕುತಂತ್ರದಿಂದ ಸರಕಾರ ರಚಿಸಿದೆ. ಸಂವಿಧಾನವನ್ನು ಅವ‌ಮಾನಿಸಿದೆ. ಶಿವಸೇನೆ ಹಾಗೂ ಎನ್‌ಸಿಪಿ ಜೊತೆ ಸೇರಿ ಬಿಜೆಪಿಯನ್ನು ವಿಶ್ವಾಸಮತದಲ್ಲಿ ಸೋಲಿಸುತ್ತೇವೆ. ಜೊತೆಗೆ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ಕಾಂಗ್ರೆಸ್‌ ಪ್ರಭಾವಿ ನಾಯಕ ಅಹ್ಮದ್‌ ಪಟೇಲ್‌ ವಾಗ್ಧಾಳಿ ನಡೆಸಿದ್ದಾರೆ.

ಮೋದಿ-ಪವಾರ್‌ ಭೇಟಿಯಲ್ಲೇ ಫಿಕ್ಸ್‌?
ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಸೇರಿ ಮೈತ್ರಿ ಸರಕಾರ ರಚಿಸುವ ಪ್ರಕ್ರಿಯೆಗಳು, ಕಸರತ್ತು ನಡೆಯುತ್ತಿದ್ದ ಸಂದರ್ಭದಲ್ಲಿ ಎನ್‌ಸಿಪಿ ನೇತಾರ ಶರದ್‌ ಪವಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಆಗಲೇ ಎನ್‌ಸಿಪಿ ಜೊತೆ ಮೈತ್ರಿ ಸರಕಾರ ರಚನೆ ಪ್ರಸ್ತಾಪ ಆಗಿರುವ ಸಾಧ್ಯತೆ ಇದೆ ಎಂದು ಕೇಳಿ ಬಂದಿದೆ.

ಇದರ ಜತೆಗೆ ರಾಜ್ಯಸಭೆಯ 250ನೇ ಅಧಿವೇಶನದಲ್ಲಿಯೂ ಕೂಡ ಪ್ರಧಾನಿ ನರೇಂದ್ರ ಮೋದಿಯವರು ಎನ್‌ಸಿಪಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದರ ಜತೆಗೆ ಶುಕ್ರವಾರ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿಕೂಟ ಸಭೆ ನಡೆಯುತ್ತಿದ್ದಂತೆ ಹಾಲಿ ಡಿಸಿಎಂ ಅಜಿತ್‌ ಪವಾರ್‌ ಕ್ಷಿಪ್ರವಾಗಿ ಹೊರ ನಡೆದಿದ್ದ ಘಟನೆಯೂ ಈಗ ಬೆಳಕಿಗೆ ಬಂದಿದೆ.

1978ರಲ್ಲಿ ಕ್ರಾಂತಿ ಮಾಡಿದ್ದರು ಪವಾರ್‌
ಬಿಜೆಪಿ ಜತೆ ಸೇರಿ ಎನ್‌ಸಿಪಿಯ ಅಜಿತ್‌ ಪವಾರ್‌ ಅವರ ನಿರ್ಧಾರ, ಅದು ತಮಗೆ ಗೊತ್ತಿರಲಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿಕೊಂಡಿದ್ದಾರೆ. ಆದರೆ 1978ರ ಜುಲೈನಲ್ಲಿ ಕಾಂಗ್ರೆಸ್‌ನ ವಸಂತರಾವ್‌ ದಾದಾ ಪಾಟೀಲ್‌ ನೇತೃತ್ವದ ಸರಕಾರದಿಂದ ರಾತ್ರೋರಾತ್ರಿ ಹೊರ ಬಂದು ಪ್ರೊಗ್ರೆಸಿವ್‌ ಡೆಮಾಕ್ರಾಟಿಕ್‌ ಫ್ರಂಟ್‌ ಎಂಬ ಹೆಸರಿನಲ್ಲಿ ಪಕ್ಷ ಸ್ಥಾಪಿಸಿ 580 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು ಶರದ್‌ ಪವಾರ್‌. ಆ ಕಾಲಕ್ಕೆ ಅವರಿಗೆ ವಯಸ್ಸು 38 ಆಗಿತ್ತು. ಹೀಗಾಗಿ ಅವರು ರಾಜ್ಯದ ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

ಎರಡು ವರ್ಷಗಳ ಬಳಿಕ ಅಧಿಕಾರಕ್ಕೆ ಬಂದ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರಕಾರ ಪವಾರ್‌ ನೇತೃತ್ವದ ಸರಕಾರವನ್ನು ವಜಾ ಮಾಡಿದ್ದರು. ವರ್ಷಗಳ ಕಾಲ ಅವರು ಪ್ರತಿಪಕ್ಷದಲ್ಲಿಯೇ ಕುಳಿತಿದ್ದರು. ರಾಜೀವ ಗಾಂಧಿಯವರು ಕಾಂಗ್ರೆಸ್‌ನಲ್ಲಿ ಪ್ರವರ್ಧಮಾನಕ್ಕೆ ಬಂದ ಬಳಿಕ ಅಂದರೆ 1986ರಲ್ಲಿ ಮರಾಠಾ ರಾಜಕೀಯ ಕ್ಷೇತ್ರದ ಹಿರಿಯ ತಲೆಯಾಳುವನ್ನು ಪಕ್ಷಕ್ಕೆ ಸೇರ್ಪಡೆ ಮಾಡಲಾಗಿತ್ತು. ಹೀಗಾಗಿ, 1978ರಲ್ಲಿ ಶರದ್‌ ಪವಾರ್‌ ವಸಂತ ರಾವ್‌ ಅವರಿಗೆ ಏನು ಮಾಡಿದ್ದರೋ ಅದುವೇ 2019ರಲ್ಲಿ ಅಜಿತ್‌ ಪವಾರ್‌ ಶರದ್‌ಗೆ ನೀಡಿದ್ದಾರೆ ಎಂಊ ವಿಶ್ಲೇಷಣೆಗಳು ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next