Advertisement
ಅ.30ರಂದೇ ಅಜಿತ್ ಪವಾರ್‌ರನ್ನು ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿತ್ತು. ಹೀಗಾಗಿ ಅವರು ಬೆಂಬಲ ಪತ್ರವನ್ನು ತಂದಿದ್ದರು ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಆ ಪತ್ರವನ್ನು ಅಜಿತ್ ಪವಾರ್ ಎಲ್ಲಿಂದ, ಹೇಗೆ ತಂದರು ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
Related Articles
Advertisement
ಶಿವಸೇನೆ ಬೆಂಬಲಿಗ ಆತ್ಮಹತ್ಯೆ ಯತ್ನ: ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಹುದ್ದೆಗೇರಲು ಸಾಧ್ಯವಾಗದ್ದಕ್ಕೆ ನೊಂದು ವಾಶಿಮ್ ಜಿಲ್ಲೆಯ ಶಿವಸೇನೆ ಬೆಂಬಲಿಗನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪಕ್ಷದ ಕಟ್ಟಾ ಬೆಂಬಲಿಗ ರಮೇಶ್ ಬಾಲು ಜಾಧವ್ ಮಹಾ ರಾಜಕೀಯ ಬೆಳವಣಿಗೆಯಿಂದ ನೊಂದು, ಬ್ಲೇಡ್‌ನಿಂದ ತನ್ನ ಕೈಗಳಿಗೆ ಹಲವು ಬಾರಿ ಕುಯ್ದು ಕೊಂಡಿದ್ದಾನೆ. ಕೂಡಲೇ ಅಲ್ಲಿದ್ದವರು ಆತನನ್ನು ತಡೆದು, ಆಸ್ಪತ್ರೆಗೆ ದಾಖಲಿಸಿದ್ದಾರೆ.
13 ಪಕ್ಷೇತರರು, 16 ಇತರೆ ಶಾಸಕರ ಮೇಲೆ ಎಲ್ಲರ ಕಣ್ಣುಹಲವು ತಿರುವುಗಳು, ಹೈಡ್ರಾಮಾಗಳ ನಡುವೆ ಮಹಾರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷಗಳು ಸರಕಾರ ರಚಿಸಲು ಹಗ್ಗಜಗ್ಗಾಟ ಮಾಡಿಕೊಳ್ಳುತ್ತಿ ದ್ದರೆ, ಎಲ್ಲರ ಕಣ್ಣು ಈಗ 13 ಮಂದಿ ಪಕ್ಷೇತರರು ಹಾಗೂ ಸಣ್ಣಪುಟ್ಟ ಪಕ್ಷಗಳ 16 ಶಾಸಕರ ಮೇಲೆ ನೆಟ್ಟಿದೆ. ಈ 29 ಶಾಸಕರು ಯಾವ ಕಡೆಗೆ ವಾಲಲಿದ್ದಾರೆ ಎನ್ನುವುದೇ ಈಗ ಮೂಡಿರುವ ಪ್ರಶ್ನೆ. ಕಾಂಗ್ರೆಸ್ – ಎನ್‌ಸಿಪಿ ಬೆಂಬಲದ ನಡುವೆ ಸರಕಾರ ರಚಿಸುವುದಾಗಿ ಹೇಳುತ್ತಿರುವ ಶಿವಸೇನೆ ತನ್ನ ಪಕ್ಷದ 56 ಶಾಸಕರನ್ನು ಹೊರತುಪಡಿಸಿ, ಇತರೆ 7 ಶಾಸಕರ ಬೆಂಬಲ ತಮಗಿದೆ ಎಂದು ಹೇಳುತ್ತಿದೆ. ಇನ್ನು, 105 ಸೀಟುಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ, ತಮಗೆ 14 ಶಾಸಕರ ಬೆಂಬಲವಿದೆ ಎಂದಿದೆ. ಈ ಮೂಲಕ ಬಿಜೆಪಿಯ ಸಂಖ್ಯಾಬಲ 119ಕ್ಕೇರಿದಂತಾಗುತ್ತದೆ. ಒಟ್ಟಿನಲ್ಲಿ ಯಾರ ಸಂಖ್ಯಾಬಲ ಮ್ಯಾಜಿಕ್ ನಂಬರ್ 145 ಅನ್ನು ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕಷ್ಟೆ. ಸಿನಿಮೀಯ ಮಾದರಿಯಲ್ಲಿ ಶಾಸಕನ ಕರೆತಂದರು!
ಬಿಜೆಪಿಯ ಆಪರೇಷನ್‌ಗೆ ಒಳಗಾಗಲಿದ್ದ ಎನ್‌ಸಿಪಿ ಶಾಸಕರೊಬ್ಬರನ್ನು ಸಂಜೆಯ ವೇಳೆಗೆ ಶಿವಸೇನೆಯ ನಾಯಕರು ಬಾಲಿವುಡ್ ಥ್ರಿಲ್ಲರ್ ಮಾದರಿಯಲ್ಲಿ ಹಿಡಿದು, ವಾಪಸ್ ಕರೆತಂದಿದ್ದಾರೆ. ಶನಿವಾರ ಬೆಳಗ್ಗೆ ಸಿಎಂ, ಡಿಸಿಎಂ ಪದಗ್ರಹಣದ ಬೆನ್ನಲ್ಲೇ ನಾಪತ್ತೆಯಾಗಿದ್ದ ಎನ್‌ಸಿಪಿ ಶಾಸಕ ಸಂಜಯ್ ಬನ್ಸೋದ್ ಅವರು ರಾತ್ರಿಯಾಗುವುದರೊಳಗೆ ದಿಲ್ಲಿಗೆ ಪ್ರಯಾಣ ಬೆಳೆಸುವುದರಲ್ಲಿದ್ದರು. ಆದರೆ, ವಿಮಾನ ನಿಲ್ದಾಣಕ್ಕೆ ಇನ್ನೇನು ತಲುಪಬೇಕು ಅನ್ನುವಷ್ಟರಲ್ಲಿ ಬನ್ಸೋದ್ ಎಲ್ಲೆಲ್ಲೂ ಹದ್ದಿನ ಕಣ್ಣಿಟ್ಟಿದ್ದ ಶಿವಸೇನೆಯ ನಾಯಕರು ಹಾಗೂ ಕಾರ್ಯಕರ್ತರ ಕಣ್ಣಿಗೆ ಬಿದ್ದರು. ಕೂಡಲೇ ಅವರನ್ನು ಹಿಡಿದಿಟ್ಟ ಶಿವಸೇನೆಯ ಏಕನಾಥ್ ಶಿಂದೆ ಹಾಗೂ ಮಿಲಿಂದ್ ನಾರ್ವೇಕರ್, ‘ಬಿಜೆಪಿ ನಿಮ್ಮನ್ನು ಅಪಹರಿಸಲು ಯತ್ನಿಸುತ್ತಿದೆಯೇ’ ಎಂದು ಪ್ರಶ್ನೆ ಹಾಕಿ, ಶಿವಸೇನೆಯ ಶಾಸಕರು ತಂಗಿರುವ ಹೊಟೇಲ್‌ಗೆ ಕರೆತಂದರು. ಅನಂತರ ಅಲ್ಲಿಗೆ ಬಂದ ಶರದ್ ಪವಾರ್ ಅವರು ಬನ್ಸೋದ್ ಜತೆ ಮಾತನಾಡಿ, ಅವರನ್ನು ಪಕ್ಷದ ಸಭೆಗೆ ಕರೆದೊಯ್ದರು. ‘ಮಿಸ್ಸಿಂಗ್’ ಶಾಸಕರು ವಾಪಸ್
ರಾತ್ರಿ ಬೆಳಗಾಗುವಷ್ಟರಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ನಾಪತ್ತೆಯಾಗಿದ್ದ ಎನ್‌ಸಿಪಿಯ ಐವರು ಶಾಸಕರ ಪೈಕಿ ಮೂವರು ಕೊನೆಗೂ ಪಕ್ಷದ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಸಿಎಂ ಫಡ್ನವೀಸ್, ಡಿಸಿಎಂ ಅಜಿತ್ ಪವಾರ್ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಿದ್ದ ಎನ್‌ಸಿಪಿ ಶಾಸಕರಾದ ದೌಲತ್ ದರೋಡಾ, ನಿತಿನ್ ಪವಾರ್, ನರಹರಿ ಜಿರ್ವಾಲ್, ಬಾಬಾ ಸಾಹೇಬ್ ಪಾಟೀಲ್, ಅನಿಲ್ ಪಾಟೀಲ್, ಅನಂತರ ಕಣ್ಮರೆಯಾಗಿದ್ದರು. ಈ ಪೈಕಿ ರವಿವಾರ ಅನಿಲ್, ಬಾಬಾಸಾಹೇಬ್ ಹಾಗೂ ದರೋಡಾ ಅವರು ಸಂಪರ್ಕಕ್ಕೆ ಸಿಕ್ಕಿದ್ದು, ನಾವು ಪಕ್ಷದ ಜೊತೆಗೇ ಇದ್ದೇವೆ ಹಾಗೂ ಶರದ್ ಪವಾರ್ ನಾಯಕತ್ವದ ಮೇಲೆ ನಂಬಿಕೆಯಿಟ್ಟಿದ್ದೇವೆ ಎಂದು ಹೇಳಿದ್ದಾರೆ. ಪಕ್ಷದ ವಕ್ತಾರ ನವಾಬ್ ಮಲಿಕ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ‘ಆಘಾತ’ವಾಗಿದೆ; ರಜೆ ಬೇಕು!
ಮಹಾರಾಷ್ಟ್ರದಲ್ಲಿ ಶನಿವಾರ ಬೆಳಗಿನ ಜಾವ ನಡೆದ ಘಟನೆಯನ್ನೇ ನೆಪವಾಗಿಟ್ಟುಕೊಂಡು ರಜೆ ಪಡೆಯಲು ಹೊರಟ ಕಾಲೇಜು ಪ್ರೊಫೆಸರ್‌ವೊಬ್ಬರಿಗೆ ನಿರಾಸೆಯಾಗಿದೆ. ಗಡ್‌ಚಂದೂರ್‌ನ ಕಾಲೇಜೊಂದರಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿರುವ ಝಹೀರ್ ಸೈಯದ್ ಅವರು ಶನಿವಾರ ಕಾಲೇಜಿನ ಪ್ರಾಂಶುಪಾಲರಿಗೆ ರಜೆಯ ಅರ್ಜಿ ಸಲ್ಲಿಸಿ, ‘ರಾಜ್ಯ ರಾಜಕೀಯದ ಬೆಳವಣಿಗೆಯ ಸುದ್ದಿ ಕೇಳಿ ಆಘಾತವಾಗಿದೆ. ಇದರಿಂದ ನಾನು ಅಸ್ವಸ್ಥನಾಗಿದ್ದೇನೆ. ಹಾಗಾಗಿ ನನಗೆ ರಜೆ ಬೇಕು’ ಎಂದು ಕೋರಿದ್ದರು. ಆದರೆ, ನಿಮಗೆಷ್ಟೇ ಆಘಾತವಾದರೂ ರಜೆ ಕೊಡಲು ಸಾಧ್ಯವಿಲ್ಲ ಎಂದು ಪ್ರಾಂಶುಪಾಲರು ಪ್ರತಿಕ್ರಿಯಿಸಿ ರಜೆಗೆ ನಿರಾಕರಿಸಿದ್ದಾರೆ. ಪ್ರೊಫೆಸರ್‌ರ ಈ ರಜೆ ಅರ್ಜಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೆ ಇನ್ನೊಂದು ಹೊಟೇಲ್‌ಗೆ ಸ್ಥಳಾಂತರ
ಮಹಾರಾಷ್ಟ್ರದ ಹೈಡ್ರಾಮಾ ಮಧ್ಯೆಯೇ ಎನ್‌ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆ ಮೂರೂ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಮುಂಬಯಿನಲ್ಲಿರುವ ಬೇರೆ ಬೇರೆ ಹೊಟೇಲ್‌ಗಳಿಗೆ ಕರೆದೊಯ್ದಿವೆ. ಆಪರೇಷನ್ ಕಮಲದ ಭೀತಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಶಾಸಕರು ಜುಹುವಿನಲ್ಲಿರುವ ಜೆಡಬ್ಲ್ಯು ಮ್ಯಾರಿಯೇಟ್ ಹೊಟೇಲ್‌ನಲ್ಲೂ, ಶಿವಸೇನೆಯ ಶಾಸಕರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ದಿ ಲಲಿತ್ ಹೊಟೇಲ್‌ನಲ್ಲಿ ತಂಗಿದ್ದಾರೆ. ಈ ಲಕ್ಸುರಿ ಹೊಟೇಲ್‌ಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಯಾವ ಶಾಸಕನೂ ಹೊರಗೆ ಹೋಗದಂತೆ ಹದ್ದಿನ ಕಣ್ಣಿಡಲಾಗಿದೆ. ಜತೆಗೆ, ಹೊಟೇಲ್‌ನೊಳಕ್ಕೆ ಪ್ರವೇಶಿಸುವ ಎಲ್ಲ ವಾಹನಗಳನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದೇ ವೇಳೆ, ಎನ್‌ಸಿಪಿ ಶಾಸಕರು ಪೊವಾಯ್‌ನ ದಿ ರಿನಯಸ್ಸೆನ್ಸ್ ಹೊಟೇಲ್‌ನಲ್ಲಿ ರವಿವಾರ ರಾತ್ರಿಯವರೆಗೂ ತಂಗಿದ್ದರು. ಆದರೆ, ಆ ಹೋಟೆಲ್‌ಗೆ ಸಿವಿಲ್ ಡ್ರೆಸ್‌ನಲ್ಲಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಬಂದಿರುವ, ಅವರನ್ನು ಎನ್‌ಸಿಪಿ ನಾಯಕರು ಪ್ರಶ್ನಿಸುತ್ತಿರುವ ವಿಡಿಯೋ ಬಹಿರಂಗವಾಗುತ್ತಲೇ, ಎನ್‌ಸಿಪಿ ಶಾಸಕರನ್ನು ಅಲ್ಲಿಂದ ಬೇರೆ ಹೊಟೇಲ್‌ಗೆ ಸ್ಥಳಾಂತರಿಸಲಾಗಿದೆ. ಈ ಪೊಲೀಸರು ಬಿಜೆಪಿಯ ಸೂಚನೆ ಮೇರೆಗೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎನ್ನುವುದು ಎನ್‌ಸಿಪಿ ಆರೋಪವಾಗಿದೆ. ಕರ್ನಾಟಕ ಸರಕಾರ ರಚನೆ: ನಡುರಾತ್ರಿ ನಡೆದಿತ್ತು ವಿಚಾರಣೆ
2018ರಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪನವರಿಗೆ ಸರಕಾರ ರಚನೆ ಮಾಡಲು ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದವು. ಜತೆಗೆ ಪ್ರಮಾಣ ವಚನಕ್ಕೆ ಅವಕಾಶ ನೀಡಿದ ಬಳಿಕ ಶಾಸಕರ ಬೆಂಬಲ ಪತ್ರದ ಬಗ್ಗೆಯೂ ಅಂದಿನ ನ್ಯಾಯಪೀಠ ವಿಚಾರಣೆ ನಡೆಸಿ, 15 ದಿನಗಳ ಕಾಲ ವಿಶ್ವಾಸಮತ ಸಾಬೀತುಪಡಿಸಲು ಅವಕಾಶ ನೀಡಿತ್ತು. 224 ಸ್ಥಾನಗಳ ಪೈಕಿ ಬಿಜೆಪಿ 105 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ರಾಜ್ಯಪಾಲ ವಿ.ಆರ್.ವಾಲಾ ಯಡಿಯೂರಪ್ಪಗೆ ಮೇ 17ರಂದು ಸರಕಾರ ರಚನೆಗೆ ಆಹ್ವಾನ ನೀಡಿದ್ದರು. ಅದನ್ನು ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್‌ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅರ್ಜಿ ಸಲ್ಲಿಕೆ ಮಾಡಿತ್ತು. ಆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದವರು ದೀಪಕ್ ಮಿಶ್ರಾ. ಅವರು ತಡರಾತ್ರಿಯೇ ನ್ಯಾ.ಎ.ಕೆ.ಸಿಕ್ರಿ, ನ್ಯಾ.ಎಸ್.ಎ.ಬೋಬ್ಡೆ, ನ್ಯಾ. ಅಶೋಕ್ ಭೂಷಣ್ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠ ರಚನೆ ಮಾಡಿದ್ದರು. ತಡರಾತ್ರಿ 2 ಗಂಟೆಗೆ ಶುರುವಾದ ವಿಚಾರಣೆ ಬರೋಬ್ಬರಿ ಮೂರುವರೆ ಗಂಟೆಗಳ ಕಾಲ ನಡೆಯಿತು. 2018ರ ಮೇ 17ರಂದು ಬೆಳಗ್ಗೆ 5.30ಕ್ಕೆ ಯಡಿಯೂರಪ್ಪನವರಿಗೆ ಸರಕಾರ ರಚನೆಗೆ ರಾಜ್ಯಪಾಲರು ನೀಡಿದ ಆಹ್ವಾನ ಕಾನೂನುಬದ್ಧವಾಗಿದೆ ಎಂಬ ತೀರ್ಪು ಹೊರಬಂತು. ಅದರಂತೆ ಮಾರನೇ ದಿನ ಮೇ 18ರಂದು ಯಡಿಯೂರಪ್ಪನವರು ಶಾಸಕರ ಬೆಂಬಲ ಪತ್ರದ ವಿವರ ಇದೆ ಎಂದು ಹೇಳಿದ್ದನ್ನು ನ್ಯಾಯಪೀಠ ವಿಚಾರಣೆ ಕೈಗೆತ್ತಿಕೊಂಡಿತ್ತು. ಜತೆಗೆ 15 ದಿನಗಳ ಕಾಲ ಹೆಚ್ಚುವರಿ ಅವಕಾಶವನ್ನೂ ನೀಡಿತ್ತು. ಇದರ ಹೊರತಾಗಿಯೂ ಅವರಿಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಇದು ಮೂರನೆಯ ವಿಶೇಷ ಕಲಾಪ
ಕೆಲಸದ ದಿನಗಳು ಅಲ್ಲದೆ, ರಜೆಯ ಅಥವಾ ವಿಶೇಷ ದಿನಗಳಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿರುವುದು ಪ್ರಸಕ್ತ ವರ್ಷ ಇದು ಮೂರನೇ ಬಾರಿಯಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೋಯ್ ವಿರುದ್ಧ ಕೇಳಿ ಬಂದಿದ್ದ ಆರೋಪದ ಬಗ್ಗೆ ಏ.20 (ಶನಿವಾರ) ವಿಚಾರಣೆ ನಡೆಸಲಾಗಿತ್ತು. ಇದಾದ ಬಳಿಕ ನ.9ರಂದು ಅಯೋಧ್ಯೆಯಲ್ಲಿರುವ 2.77 ಎಕರೆ ಜಮೀನು ಮಾಲೀಕತ್ವದ ತೀರ್ಪು ನೀಡಿದ್ದು ಕೂಡ ಶನಿವಾರವೇ. ಈ ಹಿಂದೆ ನಡೆದಿದ್ದು: ಇನ್ನು, 2018ರ ಮೇನಲ್ಲಿ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸರಕಾರ ರಚನೆ ಮಾಡಲು ರಾಜ್ಯಪಾಲರು ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂಗೆ ನಡು ರಾತ್ರಿಯೇ ಅರ್ಜಿ ಸಲ್ಲಿಕೆ ಮಾಡಿತ್ತು. ಅದೇ ದಿನರಾತ್ರಿ ಸುಪ್ರೀಂಕೋರ್ಟ್ ವಿಚಾರಣೆ ಕೂಡ ನಡೆಸಿತ್ತು. 2015ರ ಜು.29ರಂದು 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕೂಬ್ ಮೆಮನ್‌ಗೆ ಗಲ್ಲು ಶಿಕ್ಷೆ ರದ್ದು ಮಾಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಕೂಡ ಸುಪ್ರೀಂಕೋರ್ಟ್ ತಡ ರಾತ್ರಿ ವಿಚಾರಣೆ ನಡೆಸಿ, ಮಾರನೇ ದಿನ ಅಂದರೆ ಜು.30ರಂದು ಬೆಳಗ್ಗೆ 6 ಗಂಟೆಗೆ ಆತನ ವಿರುದ್ಧದ ಶಿಕ್ಷೆ ಜಾರಿ ಮಾಡಲು ಅವಕಾಶ ಕೊಟ್ಟಿತ್ತು. 1985ರಲ್ಲಿ ಆ ಕಾಲದ ಜನಪ್ರಿಯ ಉದ್ಯಮಿ ಪುತ್ರನ ವಿರುದ್ಧ ಕೇಳಿಬಂದಿದ್ದ ಫೆರಾ ಕಾಯ್ದೆ ನಿಯಮ ಉಲ್ಲಂಘನೆ ಬಗ್ಗೆ ವಿಚಾರಣೆ ನಡೆಸಲು ನಡುರಾತ್ರಿ ನಿರ್ಧಾರ ಮಾಡಿತ್ತು. ಸಿಎಂ ಫಡ್ನವೀಸ್ ಅವರಿಗೆ 170 ಶಾಸಕರ ಬೆಂಬಲವಿದೆ.
ಹೀಗಾಗಿ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವುದು ಖಚಿತ.
– ಆಶಿಷ್ ಶೇಲಾರ್, ಬಿಜೆಪಿ ನಾಯಕ ಎನ್‌ಸಿಪಿಯಿಂದ ಅಜಿತ್ ಪವಾರ್‌ರನ್ನು ಬೇರ್ಪಡಿಸುವಂಥ ಬಿಜೆಪಿಯ ‘ಜೂಜಿನಾಟ’ ಅದಕ್ಕೇ ಮುಳ್ಳಾಗಲಿದೆ. ಸೇನೆ-ಎನ್‌ಸಿಪಿ – ಕಾಂಗ್ರೆಸ್‌ಗೆ 165 ಶಾಸಕರ ಬೆಂಬಲವಿದ್ದು, ಇಂದೇ ಬೇಕಿದ್ದರೂ ಬಹುಮತ ಸಾಬೀತುಪಡಿಸಲು ನಾವು ಸಿದ್ಧರಿದ್ದೇವೆ.
– ಸಂಜಯ್ ರಾವತ್, ಶಿವಸೇನೆ ಸಂಸದ ಸಾಕಷ್ಟು ಸಂಖ್ಯಾಬಲ ಇಲ್ಲದ ಕಾರಣಕ್ಕೇ ಬಿಜೆಪಿ ಬಹುಮತ ಸಾಬೀತುಪಡಿಸಲು ಹಿಂದೇಟು ಹಾಕುತ್ತಿದೆ. ರಾಜ್ಯದಲ್ಲಿರುವ ಪ್ರಸ್ತುತ ಸರಕಾರವು ‘ಕಾನೂನುಬಾಹಿರ’ವಾದದ್ದು. ಬಹುಮತ ಸಾಬೀತುಪಡಿಸುವುದೇ ಉಳಿದಿರುವ ಏಕೈಕ ಪರಿಹಾರ.
– ಪೃಥ್ವಿರಾಜ್ ಚೌಹಾಣ್, ಕಾಂಗ್ರೆಸ್ ನಾಯಕ