ಮುಂಬಯಿ:ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿರುವ ನಡುವೆಯೇ ಅಸ್ಸಾಂನಲ್ಲಿ ವಾಸ್ತವ್ಯ ಹೂಡಿದ್ದ ಏಕನಾಥ ಶಿಂಧೆ ಗುಂಪಿಗೆ ಶುಕ್ರವಾರ (ಜೂನ್ 24) ಇನ್ನಷ್ಟು ಶಾಸಕರು ಸೇರ್ಪಡೆಯಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ. ಈಗಾಗಲೇ ಮತ್ತೊಬ್ಬ ಶಿವಸೇನಾ ಶಾಸಕರು ಶಿಂಧೆ ಪಾಳಯಕ್ಕೆ ಸೇರ್ಪಡೆಗೊಂಡಿರುವುದಾಗಿ ಮೂಲಗಳು ಹೇಳಿದೆ.
ಇದನ್ನೂ ಓದಿ:ಅರಣ್ಯ ಕ್ಷೀಣ: ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುತ್ತೇವೆ: ಲೋಕಾಯುಕ್ತ ನ್ಯಾ.ಪಾಟೀಲ
ಏಕನಾಥ ಶಿಂಧೆ ನಮ್ಮ ನಾಯಕ ಎಂದು ಗುವಾಹಟಿಯಲ್ಲಿ ಠಿಕಾಣಿ ಹೂಡಿರುವ ಶಿವಸೇನಾದ 37 ಬಂಡಾಯ ಶಾಸಕರು ಘೋಷಿಸಿ, ಮಹಾರಾಷ್ಟ್ರ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ನರಹರಿ ಝಿರ್ವಾಲ್ ಗೆ ಪತ್ರ ಬರೆದ ನಂತರ ಈ ಬೆಳವಣಿಗೆ ನಡೆದಿರುವುದಾಗಿ ಎಎನ್ ಐ ವರದಿ ವಿವರಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದ ಏಕನಾಥ ಶಿಂಧೆಗೆ 44 ಶಾಸಕರು ಬೆಂಬಲ ನೀಡಿದ್ದು, ಇದರಲ್ಲಿ 37 ಶಿವಸೇನಾ ಶಾಸಕರು ಹಾಗೂ 7 ಪಕ್ಷೇತರ ಶಾಸಕರು ಸೇರಿರುವುದಾಗಿ ವರದಿ ತಿಳಿಸಿದೆ.
ಮತ್ತೊಂದೆಡೆ ಬುಧವಾರ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ನಿಟ್ಟಿನಲ್ಲಿ ಶಿಂಧೆ ಸೇರಿದಂತೆ 12 ಮಂದಿ ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನೆ ಮನವಿ ಮಾಡಿಕೊಂಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಿಂಧೆ, 12 ಮಂದಿ ಶಾಸಕರನ್ನು ಅನರ್ಹಗೊಳಿಸುತ್ತೇವೆ ಎಂದು ಹೆಸರನ್ನು ಕೊಟ್ಟು ಹೆದರಿಸಲು ಸಾಧ್ಯವಿಲ್ಲ. ಯಾಕೆಂದರೆ ನಾವು ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ ಅನುಯಾಯಿಗಳು. ನಮಗೂ ಕಾನೂನು ಗೊತ್ತಿದೆ ಎಂದು ತಿರುಗೇಟು ನೀಡಿದ್ದರು.