Advertisement

ಗೇಟಿನ ಹೊರಗೆ ನಿಲ್ಲಬೇಕಿತ್ತು!

11:15 PM Jun 23, 2022 | Team Udayavani |

ಮುಂಬಯಿ: ಶಿವಸೇನೆಯ ಶಾಸಕರ ಬಂಡಾಯದಿಂದ ಮಹಾರಾಷ್ಟ್ರ ಸರಕಾರವು ಪತನದಂಚಿಗೆ ತಲುಪಿರುವಂತೆಯೇ, ಮುಖ್ಯ ಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ ಬಂಡಾಯಕ್ಕೆ ಕಾರಣ ವಾದ ಒಂದೊಂದೇ ಅಂಶಗಳು ಹೊರಬರ ಲಾರಂಭಿಸಿವೆ.

Advertisement

ಬುಧವಾರ ಫೇಸ್‌ಬುಕ್‌ ಲೈವ್‌ ಮೂಲಕ ಬಂಡಾಯ ಶಾಸಕರಿಗೆ ವಾಪಸ್‌ ಬರುವಂತೆ ಉದ್ಧವ್‌ ಮನವಿ ಮಾಡಿದ ಬೆನ್ನಲ್ಲೇ ಗುರುವಾರ ಗುವಾಹಾಟಿಯಿಂದಲೇ ಶಾಸಕರು ಉದ್ಧವ್‌ಗೆ ಪತ್ರ ಬರೆದು, ತಮ್ಮೊಳಗೆ ಹುದುಗಿದ್ದ ಅಸಮಾಧಾನದ ಬೆಂಕಿಯನ್ನು ಹೊರಹಾಕಿದ್ದಾರೆ.

“ನಿನ್ನೆ ನಾವು “ವರ್ಷಾ’ದಲ್ಲಿ(ಸಿಎಂ ಅಧಿಕೃತ ನಿವಾಸ) ಅಷ್ಟೊಂದು ಜನರನ್ನು ನೋಡಿ ಖುಷಿ ಪಟ್ಟೆವು. ಏಕೆಂದರೆ, ಕಳೆದ ಎರಡೂವರೆ ವರ್ಷ ಗಳಲ್ಲಿ ನಮಗೆ ಸಿಎಂ ನಿವಾಸಕ್ಕೆ ಪ್ರವೇಶವನ್ನೇ ನಿರ್ಬಂಧಿಸಲಾಗಿತ್ತು. ಗೇಟ್‌ ಹೊರಗೆ ಗಂಟೆ ಗಟ್ಟಲೆ ನಮ್ಮನ್ನು ಕಾಯಿಸಲಾಗುತ್ತಿತ್ತು. ಆದರೆ ಏಕನಾಥ ಶಿಂಧೆ ಅವರ ಮನೆಯ ಬಾಗಿಲು ನಮಗೆ ಯಾವತ್ತೂ ತೆರೆದಿತ್ತು’ ಎಂದು ಪತ್ರದಲ್ಲಿ ಶಾಸಕ ಸಂಜಯ್‌ ಶಿರ್ಸಾತ್‌ ತಿಳಿಸಿದ್ದಾರೆ.

ರಾವತ್‌ ವಿರುದ್ಧ ಕಿಡಿ: ನಾವು ಪ್ರತಿ ಬಾರಿ ಉದ್ಧವ್‌ರ ಭೇಟಿಗೆ ಬಂದಾಗಲೂ “ಚಾಣಕ್ಯ'(ಸಂಜಯ್‌ ರಾವತ್‌) ನಮ್ಮನ್ನು ದೂರವಿಡುತ್ತಿದ್ದ. ಇತ್ತೀಚೆಗೆ ಆದಿತ್ಯ ಠಾಕ್ರೆ ಅವರು ಅಯೋಧ್ಯೆಗೆ ಭೇಟಿ ನೀಡುವ ವೇಳೆ ನಾವ್ಯಾರೂ ಅವರೊಂದಿಗೆ ಹೋಗದಂತೆ ಕೊನೇ ಕ್ಷಣದಲ್ಲಿ ತಡೆದಿದ್ದೂ ಇದೇ ಸಂಜಯ್‌ ರಾವತ್‌. ಮುಂಬಯಿ ಏರ್‌ಪೋರ್ಟ್‌ನಲ್ಲಿ ನಮ್ಮ ಬ್ಯಾಗೇಜ್‌ ಚೆಕಿಂಗ್‌ ಮುಗಿದಿತ್ತು, ಬೋರ್ಡಿಂಗ್‌ ಪಾಸ್‌ ಕೂಡ ಕೈಗೆ ಸಿಕ್ಕಿತ್ತು. ಅಷ್ಟರಲ್ಲಿ, ನಾವ್ಯಾರೂ ಹೋಗುವಂತಿಲ್ಲ ಎಂಬ ಆದೇಶ ಬಂತು. ನಮಗ್ಯಾಕೆ ರಾಮ್‌ಲಲ್ಲಾನ ದರ್ಶನಕ್ಕೆ ಅವಕಾಶ ಕೊಡಲಿಲ್ಲ ಎಂದೂ ಪ್ರಶ್ನಿಸಿದ್ದಾರೆ ಬಂಡಾಯ ಶಾಸಕರು.

ಆದಿತ್ಯಗೂ ತಿಳಿಸಿದ್ದೆ: “ನಾವು ಉದ್ಧವ್‌ ಠಾಕ್ರೆ ರಾಜೀನಾಮೆ ನೀಡಲಿ ಎಂದು ಬಯಸುವುದಿಲ್ಲ. ಬದಲಿಗೆ, ಅವರು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲಿ ಎಂದು ಕೇಳಿ ಕೊಳ್ಳುತ್ತಿದ್ದೇವೆ’ ಎಂದು ಗುರುವಾರ ಬೆಳ ಗ್ಗೆಯಷ್ಟೇ ಗುವಾಹಾಟಿಗೆ ತೆರಳಿ ಬಂಡಾಯ ಬಣಕ್ಕೆ ಸೇರಿಕೊಂಡ ಶಿವಸೇನೆಯ ಮತ್ತೂಬ್ಬ ಶಾಸಕ ದೀಪಕ್‌ ಕೇಸರ್ಕರ್‌ ಹೇಳಿದ್ದಾರೆ. ನಾನು ಈ ವಿಚಾರವನ್ನು ಇತ್ತೀಚೆಗೆ ಆದಿತ್ಯ ಠಾಕ್ರೆ ಅವರ ಬಳಿಯೂ ತಿಳಿಸಿದ್ದೆ ಎಂದಿದ್ದಾರೆ.

Advertisement

ಮಾಜಿಗಳಾಗುತ್ತೀರಿ: ಈ ನಡುವೆ, “ಬಿಜೆಪಿಯ ಒತ್ತಡದ ರಾಜನೀತಿ ಮತ್ತು ಆಮಿಷಗಳಿಗೆ ಬಲಿಯಾದಂಥ ಶಾಸಕರು ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಶಿವಸೇನೆಯ ಸಾಮಾನ್ಯ ಕಾರ್ಯಕರ್ತ ಮನಸ್ಸು ಮಾಡಿದರೆ, ನೀವೆಲ್ಲರೂ ಶಾಶ್ವತವಾಗಿ ಮಾಜಿಗಳಾಗಿಯೇ ಇರಬೇಕಾಗುತ್ತದೆ’ ಎಂದು ಪಕ್ಷದ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಬಂಡಾಯ ಶಾಸಕರಿಗೆ ಎಚ್ಚರಿಕೆ ನೀಡಲಾಗಿದೆ.

ಇದೇ ವೇಳೆ, ಶಿವಸೇನೆಯ ಶಾಸಕಾಂಗ ಪಕ್ಷದ ನೂತನ ನಾಯಕರನ್ನಾಗಿ ಅಜಯ್‌ ಚೌಧರಿ ಹೆಸರನ್ನು ನಾನು ಅಂಗೀಕರಿಸಿದ್ದೇನೆ ಎಂದು ಮಹಾರಾಷ್ಟ್ರ ವಿಧಾನಸಭೆ ಉಪಸ್ಪೀಕರ್‌ ನರಹರಿ ಜಿರ್ವಾಲ್‌ ಹೇಳಿದ್ದಾರೆ. ಏಕನಾಥ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಕಿತ್ತುಹಾಕಿರುವುದರಲ್ಲಿ ತಪ್ಪೇನಿಲ್ಲ ಎಂದೂ ಹೇಳಿದ್ದಾರೆ.

ಬ್ಯಾನರ್‌ ವಾರ್‌ :

ಅಘಾಡಿ ಸರಕಾರದ ಪತನ ಸಮೀಪಿಸುತ್ತಿರು ವಂತೆಯೇ ರಾಜ್ಯದ ಹಲವೆಡೆ ಉದ್ಧವ್‌, ಶಿಂಧೆ ಹಾಗೂ ಫ‌ಡ್ನವೀಸ್‌ ಬೆಂಬಲಿಗರ ನಡುವೆ “ಬ್ಯಾನರ್‌ ವಾರ್‌’ ಆರಂಭವಾಗಿದೆ. ಕೆಲವು ಕಡೆ ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆ ಅವರ ಪರ ಬ್ಯಾನರ್‌ಗಳು ರಾರಾಜಿಸುತ್ತಿದ್ದರೆ, ಮತ್ತೆ ಕೆಲವು ಕಡೆ ಸಿಎಂ ಉದ್ಧವ್‌ ಠಾಕ್ರೆಗೆ ಬೆಂಬಲ ಸೂಚಿಸಿದ ಬ್ಯಾನರ್‌ಗಳು ಗೋಚರಿಸುತ್ತಿವೆ. ಇನ್ನೊಂದೆಡೆ, “ಮುಂದಿನ ಸಿಎಂ ಫ‌ಡ್ನವೀಸ್‌’ ಎಂದು ಬರೆದಿರುವ ಬ್ಯಾನರ್‌ಗಳೂ ಅಲ್ಲಲ್ಲಿ ಕಂಡುಬಂದಿವೆ.

ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲೂ ಆತಂಕ :

ಶಿವಸೇನೆ ಬಂಡಾಯದ ಬೆನ್ನಲ್ಲೇ ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕರೂ ಆತಂಕದಲ್ಲಿದ್ದಾರೆ. ಕಾಂಗ್ರೆಸ್‌ ಶಾಸಕರು ಆರಾಮವಾಗಿ ಓಡಾಡಿಕೊಂಡಿದ್ದಾರೆ, ಕೆಲವು ಶಾಸಕರು ಪಕ್ಷದೊಂದಿಗೆ ಗಟ್ಟಿಯಾಗಿಲ್ಲ. ಆದರೆ ಇದನ್ನು ಕೇಂದ್ರ ನಾಯಕತ್ವ ಗಂಭೀರವಾಗಿ ಪರಿಗಣಿಸಿಲ್ಲ ಎಂದು ನಾಯಕರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ವೀಕ್ಷಕ ಕಮಲ್‌ನಾಥ್‌ ಬುಧವಾರ ರಾತ್ರಿ ದಿಢೀರನೆ ಮಹಾರಾಷ್ಟ್ರಕ್ಕೆ ತೆರಳಿ; ತಮ್ಮ ಪಕ್ಷದ ಎಲ್ಲ 44 ಶಾಸಕರೊಂದಿಗೆ ಮಾತ ನಾಡಿದ್ದೇನೆ. ಎಲ್ಲವೂ ಕ್ಷೇಮವಾಗಿದೆ ಎಂದು ಭರವಸೆ ವ್ಯಕ್ತಪಡಿಸಿ, ಕೂಡಲೇ ಮಧ್ಯಪ್ರದೇಶಕ್ಕೆ ಮರಳಿದ್ದಾರೆ! ಇದರ ಬೆನ್ನಲ್ಲೇ ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕರೊಬ್ಬರು ಮೇಲಿನಂತೆ ಬೇಸರಿಸಿದ್ದಾರೆ. ಮಹಾರಾಷ್ಟ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕನಿಷ್ಠ 3ರಿಂದ 7 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಇವೆಲ್ಲ ನಾಯಕರಿಗೆ ಅರಿವಿದೆಯಾ? ಅಂತಹ ಶಾಸಕರೊಂದಿಗೆ ಕೇಂದ್ರ ನಾಯಕರು ಮಾತನಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

7 ದಿನಕ್ಕೆ 1.12 ಕೋಟಿ ರೂ. ಖರ್ಚು! :

ಮಹಾರಾಷ್ಟ್ರದ ಬಂಡಾಯ ಶಾಸಕರು ಗುವಾಹಾಟಿಯಲ್ಲಿ ವಾಸ್ತವ್ಯ ಹೂಡಲು ಆಯ್ಕೆ ಮಾಡಿಕೊಂಡಿ ರುವುದು ಐಷಾರಾಮಿ “ರ್ಯಾಡಿಸನ್‌ ಬ್ಲೂ’ ಹೊಟೇಲ್‌. ಇಲ್ಲಿ ಬಂಡಾಯ ನಾಯಕರಿಗೆಂದೇ 7 ದಿನಗಳ ಅವಧಿಗೆ 70 ಕೊಠಡಿಗಳನ್ನು ಬುಕ್‌ ಮಾಡಲಾಗಿದೆಯಂತೆ! ಒಂದು ವಾರದಲ್ಲಿ ಈ ರೂಂಗಳ ಬಾಡಿಗೆಯೇ 56 ಲಕ್ಷ ರೂ. ಆಗುತ್ತದೆ. ಇನ್ನು ಪ್ರತೀ ದಿನ ಶಾಸಕರಿಗೆ ನೀಡಲಾಗುವ ಆಹಾರಕ್ಕೆ ಆಗುವ ವೆಚ್ಚ 8 ಲಕ್ಷ ರೂ. ಅಂದರೆ ಒಟ್ಟು 7 ದಿನಗಳಲ್ಲಿ ಈ ಶಾಸಕರಿಗಾಗಿ ಮಾಡಲಾಗುತ್ತಿರುವ ವೆಚ್ಚ ಬರೋಬ್ಬರಿ 1 ಕೋಟಿ 12 ಲಕ್ಷ ರೂ.ಗಳು. ಆದರೆ ಈ ಹೊಟೇಲ್‌ ಬುಕ್‌ ಮಾಡಿದವರು ಯಾರು, ಇದರ ಬಾಡಿಗೆ ಮೊತ್ತ ನೀಡುವವರು ಯಾರು ಎಂಬುದು ಮಾತ್ರ ತಿಳಿದುಬಂದಿಲ್ಲ.

ಭದ್ರತೆ ಹೆಚ್ಚಳ :

ರಾಜಕೀಯ ಬಿಕ್ಕಟ್ಟಿನ ನಡುವೆಯೇ ಪಕ್ಷದ ಪ್ರಧಾನ ಕಚೇರಿ ಶಿವಸೇನಾ ಭವನ ಮತ್ತು ಸಿಎಂ ಉದ್ಧವ್‌ ಅವರ ಖಾಸಗಿ ನಿವಾಸ ಮಾತೋಶ್ರೀಯಲ್ಲಿ ಮುಂಬಯಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಯಾವುದೇ ಕ್ಷಣದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಉದ್ಧವ್‌ ವಿರುದ್ಧದ ಆರೋಪಗಳೇನು? : 

  • ಶಿವಸೇನೆಯ ನಾಯಕರು, ಕಾರ್ಯಕರ್ತರ ಕುರಿತು ನಿರ್ಲಕ್ಷ್ಯ
  • ಅಗತ್ಯವಿದ್ದಾಗಲೂ ಶಾಸಕರಿಗೆ ಸಿಎಂ ಲಭ್ಯವಿರುತ್ತಿರಲಿಲ್ಲ
  • ಅಪಾಯಿಂಟ್‌ಮೆಂಟ್‌ ಕೋರಿದರೂ ಸಿಗುತ್ತಿರಲಿಲ್ಲ
  • ಪ್ರಮುಖ ನಿರ್ಧಾರ ಕೈಗೊಳ್ಳುವಾಗಲೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ
  • ಸೇನೆ ಮಾತ್ರವಲ್ಲದೇ, ಕಾಂಗ್ರೆಸ್‌, ಎನ್‌ಸಿಪಿ, ಸಣ್ಣಪುಟ್ಟ ಪಕ್ಷಗಳ ನಾಯಕರಿಗೂ ಸಿಎಂ ಭೇಟಿ ಅಸಾಧ್ಯವಾಗಿತ್ತು
    ಪುತ್ರ ಆದಿತ್ಯ ಠಾಕ್ರೆ, ಸಂಸದ ಸಂಜಯ್‌ ರಾವತ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು

ಅಘಾಡಿ ಸರಕಾರದ ಅಸ್ಥಿರತೆಗೆ ಬಿಜೆಪಿ ಮತ್ತು ಕೇಂದ್ರ ಸರಕಾರವೇ ಕಾರಣ. ಬಿಜೆಪಿ ಸರಕಾರ ರಚನೆಯಾಗಬೇಕು ಮತ್ತು ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗೆ ಹೆಚ್ಚಿನ ಮತ ಸಿಗಬೇಕೆಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ.-ಮಲ್ಲಿಕಾರ್ಜುನ ಖರ್ಗೆ,ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next