ಪುಣೆ: ಭಾರತದ ಅಗ್ರ ಕ್ರಮಾಂಕದ ಆಟಗಾರ ಯೂಕಿ ಭಾಂಬ್ರಿ ಅವರಿಗೆ ವರ್ಷಾರಂಭದ ಮಹಾರಾಷ್ಟ್ರ ಓಪನ್ ಟೆನಿಸ್ ಕೂಟದ ಮೊದಲ ಸುತ್ತಿನಲ್ಲಿ ಸುಲಭ ಎದುರಾಳಿ ಸಿಕ್ಕಿದ್ದಾರೆ. ಕೂಟದ ಫೇವರಿಟ್ ಮರಿನ್ ಸಿಲಕ್ ಮತ್ತು ಹಾಲಿ ಚಾಂಪಿಯನ್ ರಾಬೆರ್ಟೊ ಬಾಟಿಸ್ಟ ಆಗುಟ್ ಅವರಿಗೆ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದೆ. ಯುಎಸ್ ಓಪನ್‌ನ ಫೈನಲಿಸ್ಟ್ ಮತ್ತು ದ್ವಿತೀಯ ಶ್ರೇಯಾಂಕದ ಕೆವಿನ್ ಆ್ಯಂಡರ್ಸನ್ ಕೂಡ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ.
ವಿಶ್ವದ 116ನೇ ರ್‍ಯಾಂಕಿನ ಭಾಂಬ್ರಿ ಮೊದಲ ಸುತ್ತಿನಲ್ಲಿ ವೈಲ್ಡ್ ಕಾರ್ಡ್ ಪ್ರವೇಶಿಗ ಅರ್ಜುನ್ ಖಾಡೆ ಅವರ ಸವಾಲನ್ನು ಎದುರಿಸಲಿದ್ದಾರೆ. ಭಾಂಬಿ ಈ ವರ್ಷ ಉತ್ತಮ ಫಾರ್ಮ್ನಲ್ಲಿದ್ದಾರೆ. ಪುಣೆ ಚಾಲೆಂಜರ್ ಕೂಟದ ಪ್ರಶಸ್ತಿ ಗೆದ್ದಿರುವ ಅವರು ವರ್ಷಾಂತ್ಯದಲ್ಲಿ ನಡೆದ ಬೆಂಗಳೂರು ಓಪನ್ ಕೂಟದಲ್ಲಿ ಸೆಮಿಫೈನಲ್ ತಲುಪಿದ್ದರು. ಇದೇ ವೇಳೆ ಓಕ್ಲಹೋಮ ವಿವಿಯಲ್ಲಿ ಡಿಗ್ರಿ ಪಡೆದಿರುವ ಖಾಡೆ ಈ ವರ್ಷ ಟೆನಿಸ್ ರಂಗಕ್ಕೆ ಮರಳಿದ್ದರು.
ಭಾಂಬ್ರಿ ಈ ಕೂಟದಲ್ಲಿ ಉತ್ತಮ ನಿರ್ವಹಣೆ ದಾಖಲಿಸಿದಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ 88ನೇ ರ್‍ಯಾಂಕಿನ ಪೀರ್ ಹ್ಯೂಗ್ಸ್ ಹೆರ್ಬರ್ಟ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಭಾರತದ ಇನ್ನೋರ್ವ ಆಟಗಾರ ರಾಮ್‌ಕುಮಾರ್ ರಾಮನಾಥನ್ ಮೊದಲ ಸುತ್ತಿನಲ್ಲಿ ರಾಬರ್ಟೊ ಕಾರ್ಬಲೆಸ್ ಬಯಿನ ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಈ ಪಂದ್ಯದಲ್ಲಿ ಗೆದ್ದು ಮುನ್ನಡೆದರೆ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸಿಲಿಕ್ ಅವರನ್ನು ಎದುರಿಸಲಿದ್ದಾರೆ.
ಈ ವರ್ಷದ ವಿಂಬಲ್ಡನ್‌ನಲ್ಲಿ ರೋಜರ್ ಫೆಡರರ್‌ಗೆ ಸೋತು ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದ ಮರಿನ್ ಸಿಲಿಕ್ ಅವರು ಚೆನ್ನೈಯಲ್ಲಿ ನಡೆದ ಕಳೆದ ಋತುವಿನ ಕೂಟದ ದ್ವಿತೀಯ ಸುತ್ತಿನಲ್ಲಿ ಸ್ಲೋವಾಕಿಯಾದ ಜೊಜೆಫ್ ಕೊವಾಲಿಕ್ ಅವರೆದುರು ಆಘಾತಕಾರಿ ಸೋಲನ್ನು ಕಂಡಿದ್ದರು. ಕಳೆದ ವರ್ಷದ ವಿಜೇತ ಆಗುಟ್ ಅವರು ಗೈಲ್ಸ್ ಸಿಮೋನ್ ಮತ್ತು ಟೆನಿಸ್ ಸ್ಯಾಂಡ್‌ಗ್ರಿನ್ ಅವರ ನಡುವಣ ಹೋರಾಟದ ವಿಜೇತರನ್ನು ಎದುರಿಸಲಿದ್ದಾರೆ.