Advertisement

ಮಹಾರಾಷ್ಟ್ರ ಅತ್ಯಂತ ಭ್ರಷ್ಟ ರಾಜ್ಯ:ಎನ್‌ಸಿಆರ್‌ಬಿ

03:43 PM Dec 05, 2017 | Team Udayavani |

ಮುಂಬಯಿ: ಮಹಾರಾಷ್ಟ್ರ ಸತತ ಮೂರನೇ ವರ್ಷವೂ ದೇಶದ ಅತ್ಯಂತ ಭ್ರಷ್ಟ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಗುರುವಾರ ಬಿಡುಗಡೆಯಾಗಿರುವ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ವರದಿಯ ಪ್ರಕಾರ ರಾಜ್ಯದಲ್ಲಿ 2016ರಲ್ಲಿ ಭ್ರಷ್ಟಾಚಾರದ 1,016 ಪ್ರಕರಣಗಳು ದಾಖಲಾಗಿವೆ. ಅದೇ, ಒರಿಸ್ಸಾ 569 ಭ್ರಷ್ಟಾಚಾರ ಪ್ರಕರಣಗಳೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ವಿಶೇಷವೆಂದರೆ, ಭಾರತದಲ್ಲಿ ದಾಖಲಾಗಿರುವ ಒಟ್ಟು ಭ್ರಷ್ಟಾಚಾರ ಪ್ರಕರಣಗಳ ಪೈಕಿ ಶೇ. 22.9ರಷ್ಟು ಪ್ರಕರಣಗಳು ಮಹಾರಾಷ್ಟ್ರದ್ದಾಗಿವೆ.

Advertisement

ಆದಾಗ್ಯೂ,  ಕೇವಲ ಒಂದು ಸಿಹಿ ಸುದ್ದಿ ಏನೆಂದರೆ ರಾಜ್ಯದಲ್ಲಿ  ಹಿಂದಿನ ವರ್ಷಗಳ ತುಲನೆಯಲ್ಲಿ ಈ ಬಾರಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ರಾಜ್ಯದಲ್ಲಿ 2015 ಮತ್ತು 2014ರಲ್ಲಿ ಕ್ರಮವಾಗಿ 1,279 ಮತ್ತು 1,316 ಭ್ರಷ್ಟಾಚಾರ ಪ್ರಕರಣಗಳು ವರದಿಯಾಗಿದ್ದವು.

ಸಾರ್ವಜನಿಕ ಸೇವಕರು (ರಾಜ್ಯ ಸರಕಾರದ)ಹಾಗೂ ಅವರಿಗಾಗಿ ಕೆಲಸ ಮಾಡುವ ಜನರ ಪೈಕಿ ಭ್ರಷ್ಟರನ್ನು ಬಂಧಿಸುವುದು ಎಸಿಬಿಯ ಜವಾಬ್ದಾರಿ ಆಗಿದೆ. ಎಸಿಬಿ 3 ಹಂತಗಳಲ್ಲಿ ಕಾರ್ಯಾಚರಣೆ ನಡೆಸುತ್ತದೆ. ಒಂದನೇಯದ್ದು  ಲಂಚ ಸ್ವೀಕರಿಸುವ ಸಂದರ್ಭ ರೆಡ್‌ಹ್ಯಾಂಡ್‌ ಆಗಿ ಬಂಧಿಸುವುದಾಗಿದೆ.  ಎರಡನೇಯದ್ದು  ಗೊತ್ತುಪಡಿಸಲಾಗಿರುವ ಆದಾಯ ಮೂಲಗಳಿಗಿಂತ ಹೆಚ್ಚು ಆದಾಯ ಗಳಿಸುವವರ ವಿರುದ್ಧ ಕಾರ್ಯಾಚರಣೆ ನಡೆಸುವುದು ಹಾಗೂ ಮೂರನೇಯದ್ದು  ಸರಕಾರಿ ನಿಧಿಯ ದುರುಪಯೋಗ ಮಾಡಿ ಕಳಪೆ ಮಟ್ಟದ ರಸ್ತೆ ಅಥವಾ  ಇತರ ನಿರ್ಮಾಣ ಕಾರ್ಯಗಳನ್ನು ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸುವುದಾಗಿದೆ.

ಭ್ರಷ್ಟಾಚಾರ ನಿಗ್ರಹ ದಳವು  2016ರಲ್ಲಿ ರಾಜ್ಯಾದ್ಯಂತ ಭ್ರಚಾrಚಾರಕ್ಕೆ ಸಂಬಂಧಿಸಿದ 1,016 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈ ಪೈಕಿ 985 ಪ್ರಕರಣಗಳಲ್ಲಿ ಭ್ರಷ್ಟರನ್ನು ಲಂಚ ಸ್ವೀಕರಿಸುವ ಸಂದರ್ಭ ರೆಡ್‌ಹ್ಯಾಂಡ್‌ ಆಗಿ ಬಂಧಿಸಲಾಗಿದೆ. 2016ರಲ್ಲಿ ಮುಂಬಯಿಯಲ್ಲಿ 59, ಥಾಣೆಯಲ್ಲಿ 120, ಅಮರಾವತಿಯಲ್ಲಿ 110, ಔರಂಗಾಬಾದ್‌ 120 ಹಾಗೂ ನಾಂದೇಡ್‌ ವ್ಯಾಪ್ತಿಯಲ್ಲಿ  103 ಮಂದಿ ಲಂಚಕೋರರನ್ನು ಬಂಧಿಸಲಾಗಿದೆ. ಅದೇ, ನಾಗ್ಪುರ ನಗರ ವ್ಯಾಪ್ತಿಯಲ್ಲಿ 135 ಲಂಚಕೋರರನ್ನು ಬಂಧಿಸಲಾಗಿದೆ.

2016ರ ಅಗ್ರ ಐದು ಭ್ರಷ್ಟ ಇಲಾಖೆಗಳಲ್ಲಿ ಕಂದಾಯ, ಪೊಲೀಸ್‌, ಪಂಚಾಯತ್‌ ಸಮಿತಿ, ವಿದ್ಯುತ್‌ ಇಲಾಖೆ ಹಾಗೂ ಸ್ಥಳೀಯ ಸ್ವಯಂ ಆಡಳಿತ  ಸಂಸ್ಥೆಯಂತಹ ಮಹಾನಗರ ಪಾಲಿಕೆಗಳು ಸೇರಿವೆ. ಕಂದಾಯ ಮತ್ತು ಪೊಲೀಸ್‌ ಇಲಾಖೆಯು ಮೊದಲ 2 ಸ್ಥಾನಗಳಲ್ಲಿ ಹಾಗೇ ಉಳಿದಿವೆ.

Advertisement

ಈ ಇಲಾಖೆಗಳಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತದೆ
ರಾಜ್ಯದಲ್ಲಿ ಯೋಜನೆಗಳ ಅನುಷ್ಠಾನ ಹಾಗೂ ನಿರ್ಮಾಣ ಕಾರ್ಯಗಳಿಗೆ ಸಂಬಂಧಿಸಿದ  9 ಇಲಾಖೆಗಳು ಸರಕಾರಿ ಹಣದ ಅತೀವ ದುರ್ಬಳಕೆ ಮಾಡುತ್ತಿವೆ. ಅವುಗಳಲ್ಲಿ ನೀರಾವರಿ, ಪಂಚಾಯತ್‌ ಸಮಿತಿ, ಲೊಕೋಪಯೋಗಿ ಇಲಾಖೆ, ಕಂದಾಯ, ಮಹಾನಗರ ಪಾಲಿಕೆ, ಸಹಕಾರಿ, ಆದಿವಾಸಿ ಇಲಾಖೆ, ಮ್ಹಾಡಾ, ಆರೋಗ್ಯ ಇಲಾಖೆ ಇತ್ಯಾದಿ ಸೇರಿವೆ. ಪ್ರಸಕ್ತ ವರ್ಷದಲ್ಲಿ  ಕಂದಾಯ, ಮಹಾನಗರ ಪಾಲಿಕೆ, ನೀರಾವರಿ, ಜಿಲ್ಲಾ ಪರಿಷತ್‌ ಹಾಗು ಮಾಲಿನ್ಯ ನಿಯಂತ್ರಣ ಮಂಡಳಿಯು ಸರಕಾರಿ ಹಣದ ದುರ್ಬಳಕೆ ಮಾಡಿರುವುದು ಕಂಡುಬಂದಿದೆ. ಈ ಪ್ರಕರಣಗಳಲ್ಲಿ  ತನಿಖೆ ನಡೆಸಲು ಎಸಿಬಿಯು ಸಂಬಂಧಪಟ್ಟ ಇಲಾಖೆಗಳ ತಾಂತ್ರಿಕ ಅಧಿಕಾರಿಗಳಿಂದ ಸಹಾಯ ಪಡೆಯುತ್ತಿದೆ.

ಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ಉತ್ತಮ ಸಂಕೇತವಾಗಿವೆ ರಾಜ್ಯವು ಸತತ ಮೂರನೇ ಬಾರಿಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಮೊದಲನೇ ಸ್ಥಾನ ಪಡೆದಿರುವುದು ಜನರಲ್ಲಿ ನಾಚಿಕೆ, ಸಂಕೋಚ, ಚಿಂತೆ ಹಾಗೂ ಅಕ್ರೋಶವನ್ನು ಕೆರಳಿಸಿರಬಹುದು. ಆದರೆ, ತಜ್ಞರು ಇದನ್ನು ಉತ್ತಮ ಸಂಕೇತವೆಂದು ಕರೆದಿದ್ದಾರೆ.

ದೇಶದಲ್ಲೇ ಅತಿ ಹೆಚ್ಚು ಭ್ರಷ್ಟಾಚಾರದ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ ಎಂದರೆ, ಅದು ಇಲ್ಲಿ ಭ್ರಷ್ಟ  ಸಾರ್ವಜನಿಕ ಸೇವಕರು ಹೆಚ್ಚಿದ್ದಾರೆ ಎಂದರ್ಥವಲ್ಲ. ನಾವು ಭ್ರಷ್ಟಾಚಾರಿಗಳ ಮೇಲೆ ವೇಗವಾಗಿ ಲಗಾಮು ಹಾಕುತ್ತಿದ್ದೇವೆ ಎಂದರ್ಥವಾಗುತ್ತದೆ.  ಭ್ರಷ್ಟಾಚಾರಿಗಳಿಗೆ ನಾವು ಹೆಚ್ಚು ಅವಕಾಶ ನೀಡುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.  ರಾಜ್ಯ ಪೊಲೀಸರ ಕಾರ್ಯಾಚರಣೆಯಿಂದ ಭ್ರಷ್ಟರಲ್ಲಿ ಭಯ ಆವರಿಸಿದೆ ಎಂದು ರಾಜ್ಯದ ಮಾಜಿ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ದೀಕ್ಷಿತ್‌ ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರವೀಣ್‌ ದೀಕ್ಷಿತ್‌ ಅವರು 2016ರ ವರೆಗೆ ರಾಜ್ಯದ ಪೊಲೀಸ್‌ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next