ಮುಂಬಯಿ : ಮತ್ತೆ ಮಸಿ ಎರಚುವ ಬೆದರಿಕೆಗಳ ನಡುವೆ, ಮಹಾರಾಷ್ಟ್ರದ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಚಂದ್ರಕಾಂತ್ ಪಾಟೀಲ್ ಶನಿವಾರ (ಡಿ 17) ಪುಣೆಯ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸುವಾಗ ಫೇಸ್ ಶೀಲ್ಡ್ ಧರಿಸಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮ ಜ್ಯೋತಿಬಾ ಫುಲೆ ಅವರ ವಿವಾದಾತ್ಮಕ ಹೇಳಿಕೆಗಳನ್ನು ವಿರೋಧಿಸಿ ಪಿಂಪ್ರಿ ನಗರದಲ್ಲಿ ಮೂವರು ವ್ಯಕ್ತಿಗಳು ಪಾಟೀಲ್ ಅವರ ಮೇಲೆ ಶಾಯಿ ಎಸೆದ ಒಂದು ವಾರದ ನಂತರ ಈ ಬೆಳವಣಿಗೆ ನಡೆದಿದೆ. ಪಾಟೀಲ್ ಅವರು ಕಳೆದ ವಾರ ಪದಾಧಿಕಾರಿಯೊಬ್ಬರ ಮನೆಯಿಂದ ಹೊರಬರುತ್ತಿದ್ದಾಗ ಮೂವರು ವ್ಯಕ್ತಿಗಳು ಅವರ ಮೇಲೆ ಮಸಿ ಎರಚಿದ್ದರು.
‘ಯಾವುದೇ ರೀತಿಯ ಸೋಂಕಿನಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ವೈದ್ಯರ ಸಲಹೆಯಂತೆ ಸಚಿವರು ಮುಖ ಕವಚವನ್ನು ಹಾಕಿಕೊಂಡಿದ್ದಾರೆ ಎಂದು ಪಾಟೀಲ್ ಅವರ ಆಪ್ತರು ಹೇಳಿದ್ದಾರೆ.
ಇದೇ ವೇಳೆ ಚಂದ್ರಕಾಂತ್ ಪಾಟೀಲ್ ಮೇಲೆ ಮಸಿ ಬಳಿದು ಬೆದರಿಕೆ ಹಾಕಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಪಾಟೀಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸಂದೇಶ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಎನ್‌ಸಿಪಿ ಕಾರ್ಯಾಧ್ಯಕ್ಷ ವಿಕಾಸ್ ಲೋಲೆ ಮತ್ತು ದಶರಥ್ ಪಾಟೀಲ್ ವಿರುದ್ಧ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಸಾಂಗ್ವಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.