ಔರಂಗಾಬಾದ್ : ತನಗೆ ಎಪ್ರಿಲ್ ತಿಂಗಳಿಗೆ 8.64 ಲಕ್ಷ ರೂ. ವಿದ್ಯುತ್ ಬಿಲ್ ಬಂದುದನ್ನು ಕಂಡು ಹೌಹಾರಿದ 40 ವರ್ಷ ಪ್ರಾಯದ ತರಕಾರಿ ಮಾರಾಟಗಾರನೋರ್ವ ಇಲ್ಲಿನ ಭರತ್ ನಗರದಲ್ಲಿನ ತನ್ನ ಮನೆಯಲ್ಲಿ ಸೂರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತನಗೆ ಭಾರೀ ಮೊತ್ತದ ವಿದ್ಯುತ್ ಬಿಲ್ ಬಂದಿರುವುದನ್ನು ಕಂಡು ಶಾಕ್ ಆಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರವುದಾಗಿ ಜಗನ್ನಾಥ ಶೇಳ್ಕೆ ಎಂಬ ಸಣ್ಣ ವ್ಯಾಪಾರಿ ಡೆತ್ ನೋಟ್ ಬರೆದಿಟ್ಟಿರುವುದು ಪೊಲೀಸರಿಗೆ ಸಿಕ್ಕಿದೆ.
ಈ ಘಟನೆಯನ್ನು ಅನುಸರಿಸಿ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣ ಕಂಪೆನಿ ಎಂಎಸ್‌ಇಡಿಸಿಎಲ್ ಸಂಬಂಧಿಕ ಬಿಲ್ಲಿಂಗ್ ಕ್ಲರ್ಕ್ ನನ್ನು ಅಮಾನತು ಮಾಡಿದೆ.
ಜಗನ್ನಾಥ ಶೇಳ್ಕೆ ಅವರು ಕಳೆದ 20 ವರ್ಷದಿಂದ ಎರಡು ಕೋಣೆಯ ಟಿನ್ ಶೆಡ್ ಮನೆಯಲ್ಲಿ ತನ್ನ ಕುಟುಂಬ ಸಹಿತ ವಾಸವಾಗಿದ್ದಾರೆ. ಇವರಿಗೆ 55,519 ಯೂನಿಟ್ ವಿದ್ಯುತ್ ಬಳಕೆಗಾಗಿ 8,64,781 ರೂ. ಬಿಲ್ ಬಂದಿತ್ತು.
ಗಾರ್‌ಖೇಡ ಸ್ಟೇಶನ್‌ನ ಸೆಕ್ಷನ್ ಇಂಜಿನಿಯರ್ ಅವರು 6,117.8 ಕೆಡಬ್ಲ್ಯುಎಚ್ ಬದಲಿಗೆ 61,1478 ಕೆಡಬ್ಲ್ಯು ಎಚ್ ಮೀಟರ್ ರೀಡಿಂಗ್ ಪಂಚ್ ಮಾಡಿದ್ದರು. ಪರಿಣಾಮವಾಗಿ ಶೇಳ್ಕೆಗೆ ಮಾರ್ಚ್ ತಿಂಗಳಿಗೆ 8.6 ಲಕ್ಷ ರೂ. ವಿದ್ಯುತ್ ಬಿಲ್ ಜಾರಿಯಾಗಿತ್ತು.
ಶೇಳ್ಕೆ ಅವರ ವಿದ್ಯುತ್ ಮೀಟರ್ ಅನ್ನು ಈ ವರ್ಷ ಜನವರಿ 10ರಂದು ಬದಲಾಯಿಸಲಾಗಿತ್ತು. ಮೀಟರ್ ದೋಷಯುಕ್ತವಾಗಿರುವುದರಿಂದ ಹೀಗಾಗಿರಬಹುದು ಎಂದು ವಿದ್ಯುತ್ ಕಂಪೆನಿ ಹೇಳಿದೆ.
ಪಂಡಲೀಕ ನಗರ ಪೊಲೀಸ್ ಠಾಣೆಯವರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.