ನವದೆಹಲಿ: ಮಹಾರಾಷ್ಟ್ರದಲ್ಲಿನ ಲೌಡ್ ಸ್ಪೀಕರ್ ವಿವಾದದ ನಡುವೆಯೇ, ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ ಎಸ್) ವರಿಷ್ಠ ರಾಜ್ ಠಾಕ್ರೆಗೆ ರಾಜ್ಯ ಸರ್ಕಾರ ಹೆದರಿದೆ ಎಂದು ಮೈತ್ರಿ ಪಕ್ಷವಾದ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಶನಿವಾರ (ಮೇ 07) ಆರೋಪಿಸಿದ್ದಾರೆ.
ಇದನ್ನೂ ಓದಿ:ಪಿಎಸ್ಐ ಅಕ್ರಮದಲ್ಲಿ ಭಾಗಿಯಾದವರ ಹೆಸರನ್ನು ಸಿಎಂ ಹೇಳಬೇಕು: ಡಿಕೆ ಶಿವಕುಮಾರ್
ಮೇ 1ರಂದು ಔರಂಗಬಾದ್ ರಾಲಿಯಲ್ಲಿ ಷರತ್ತುಗಳನ್ನು ಉಲ್ಲಂಘಿಸಿದ ರಾಜ್ ಠಾಕ್ರೆಯನ್ನು ಬಂಧಿಸುವಂತೆ ಒತ್ತಾಯಿಸಿರುವ ನಿರುಪಮ್, ಮಹಾರಾಷ್ಟ್ರದಲ್ಲಿ ಕೋಮು ಉದ್ವಿಗ್ನತೆ ಹೆಚ್ಚಳವಾಗದಂತೆ ತಡೆಗಟ್ಟಬೇಕಾಗಿದೆ ಎಂದು ತಿಳಿಸಿದ್ದಾರೆ.
ಔರಂಗಬಾದ್ ಸಮಾವೇಶಕ್ಕೆ ಮಹಾರಾಷ್ಟ್ರ ಪೊಲೀಸರು 16 ಷರತ್ತುಗಳನ್ನು ವಿಧಿಸಿದ್ದು, ಇದರಲ್ಲಿ ರಾಜ್ ಠಾಕ್ರೆ 12 ಷರತ್ತು ಉಲ್ಲಂಘಿಸಿದ್ದಾರೆ. ಎರಡು ನ್ಯಾಯಾಲಯಗಳು ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಆದರೂ ಮುಂಬಯಿ ಪೊಲೀಸರು ಏನೂ ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ ಎಂಬುದು ಅರ್ಥವಾಗುತ್ತಿಲ್ಲ. ಇದರಿಂದ ಮಹಾರಾಷ್ಟ್ರ ಸರ್ಕಾರ ರಾಜ್ ಠಾಕ್ರೆಗೆ ಹೆದರುತ್ತಿದೆ ಎಂದಾಯ್ತು ಎಂಬುದಾಗಿ ಸಂಜಯ್ ನಿರುಪಮ್ ಆರೋಪಿಸಿದ್ದಾರೆ.
ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸರ್ಕಾರ ಹೆದರಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಇದೆ. ಯಾರೇ ಆಗಲಿ ಕಾನೂನಿಗೆ ಸವಾಲು ಹಾಕಿದರೆ, ಅದಕ್ಕೆ ತಕ್ಕ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಸಂಜಯ್ ತಿಳಿಸಿದ್ದಾರೆ.