Advertisement

ಮಹಾರಾಷ್ಟ್ರ: ಉದ್ಧವ್‌ ಸಿಎಂ?

08:18 AM Nov 23, 2019 | mahesh |

ಮುಂಬೈ/ನವದೆಹಲಿ: ಒಂದು ತಿಂಗಳ ರಾಜಕೀಯ ಹಗ್ಗಜಗ್ಗಾಟದ ಬಳಿಕ ಕೊನೆಗೂ ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಗೇರುವುದು ನಿಚ್ಚಳವಾಗಿದೆ. ಮುಂಬೈನಲ್ಲಿ ಶುಕ್ರವಾರ ನಡೆದ ಶಿವಸೇನೆ- ಎನ್‌ಸಿಪಿ-ಕಾಂಗ್ರೆಸ್‌ ಸಭೆಯಲ್ಲಿ ಈ ಕುರಿತು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಹೀಗಾಗಿ, ಮಹಾರಾಷ್ಟ್ರ ರಾಜಕೀಯದಲ್ಲಿ ದಶಕಗಳ ಕಾಲ ಪ್ರಭಾವದ ಛಾಪು ಮೂಡಿಸಿದ್ದ ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್‌ ಠಾಕ್ರೆಯ ಕುಟುಂಬದ ಸದಸ್ಯರು ಮೊದಲ ಬಾರಿಗೆ ಅತ್ಯುನ್ನತ ಹುದ್ದೆಗೆ ಏರುವುದು ಸದ್ಯಕ್ಕೆ ದೃಢೀಕರಣಗೊಂಡಂತಾಗಿದೆ. ಜತೆಗೆ 20 ವರ್ಷಗಳ ನಂತರ ಶಿವಸೇನೆಯ ಒಬ್ಬರು ಸಿಎಂ ಸ್ಥಾನಕ್ಕೇರುತ್ತಿದ್ದಾರೆ. ಸರ್ಕಾರ ರಚನೆ, ಖಾತೆ ಹಂಚಿಕೆ ಬಗ್ಗೆ ಮಾತುಕತೆ ಅಪೂರ್ಣಗೊಂಡಿದ್ದು, ಶನಿವಾರವೂ ಮುಂದುವರಿಯಲಿದೆ.

Advertisement

ಸಮಾನ ಅಧಿಕಾರ ಹಂಚಿಕೆಗೆ ಒಪ್ಪಿಕೊಂಡಿಲ್ಲವೆಂದು ತಕರಾರು ತೆಗೆದು ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿರುವ ಶಿವಸೇನೆಯ ಮುಖ್ಯಮಂತ್ರಿ ಕನಸು ಸದ್ಯಕ್ಕೆ ನನಸಾಗುವಂತೆ ತೋರುತ್ತಿದೆ. ಮುಂಬೈನಲ್ಲಿ ಶುಕ್ರವಾರ ನಡೆದ ಮೂರು ಪಾಲುದಾರ ಪಕ್ಷಗಳ ಸಭೆಯಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರೇ ಭಿನ್ನ ಸಿದ್ಧಾಂತಗಳ ಪಕ್ಷಗಳ ಮೈತ್ರಿಯ ಸರ್ಕಾರದ ನೇತೃತ್ವ ವಹಿಸಬೇಕು ಎಂಬ ಬೇಡಿಕೆ ವ್ಯಕ್ತವಾಯಿತು.

ವಿಶೇಷವಾಗಿ ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌ ಅವರೇ ಈ ಸಲಹೆ ಮುಂದಿಟ್ಟರು. ಅದನ್ನು ಕಾಂಗ್ರೆಸ್‌ನ ನಾಯಕರೂ ಅನುಮೋದಿಸಿದರು. ಆರಂಭದಲ್ಲಿ ಹುದ್ದೆಯನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿದರೂ, ನಂತರ ಒಪ್ಪಿಕೊಂಡರು. ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆ ಸೇರಿ 16, ಎನ್‌ಸಿಪಿಗೆ 14, ಕಾಂಗ್ರೆಸ್‌ಗೆ 12 ಸಚಿವ ಸ್ಥಾನಗಳ ಹಂಚಿಕೆಯ ಬಗ್ಗೆ ಸಹಮತ ವ್ಯಕ್ತವಾಗಿದೆ. ಇದರ ಹೊರತಾಗಿ
ಯೂ ಕೂಡ ಮಾತುಕತೆಗಳು ಅಪೂರ್ಣವಾಗಿದ್ದು, ಶನಿವಾರ ಮುಂದುವರಿಯಲಿದೆ ಎಂದು ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಹೇಳಿದ್ದಾರೆ.

ಇಂದು ಪೂರ್ಣ ಚಿತ್ರಣ: ಹೊಸ ಸರ್ಕಾರ ರಚನೆ ಹಿನ್ನೆಲೆಯಲ್ಲಿ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರನ್ನು ಶನಿವಾರ ಭೇಟಿಯಾಗಿ ಮೂರು ಪಕ್ಷಗಳ ನಾಯಕರು ಉದಟಛಿವ್‌ ಠಾಕ್ರೆ ನೇತೃತ್ವದಲ್ಲಿ ಹಕ್ಕು ಮಂಡಿಸಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಶನಿವಾರ ನಡೆಯಲಿರುವ ಸಮಾಲೋಚನೆ ಬಳಿಕ ಈ ಬಗ್ಗೆ ನಿರ್ಧರಿಸಲಾಗುತ್ತದೆ. ಮೂರು ಪಕ್ಷಗಳ ಸಭೆಯ ಬಳಿಕ ಮಾತನಾಡಿದ ಮಾಜಿ ಸಿಎಂ ಪೃಥ್ವಿರಾಜ್‌ ಚೌಹಾಣ್‌, “ಸರ್ಕಾರ ರಚಿಸುವ
ಕೊನೆಯ ಹಂತದಲ್ಲಿದ್ದೇವೆ’ ಎಂದರು.

“ಉದ್ಧವ್‌ ಠಾಕ್ರೆಯವರೇ ಮೂರು ಪಕ್ಷಗಳ ನಾಯಕತ್ವ ವಹಿಸಲಿದ್ದಾರೆ ಎಂದು ಶರದ್‌ ಪವಾರ್‌ ಹೇಳಿದ್ದಾರೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಪೃಥ್ವಿರಾಜ್‌ “ಅವರು ಏನೇ ಹೇಳಿದ್ದರೂ, ಸರಿ ಯಾಗಿಯೇ ಹೇಳಿದ್ದಾರೆ’ ಎಂದರು. ಕಾಂಗ್ರೆಸ್‌, ಎನ್‌ಸಿಪಿ ನಡುವೆ ನವದೆಹಲಿಯಲ್ಲಿ ನಡೆದ ಮಾತುಕತೆಯಲ್ಲಿ ಎನ್‌ಸಿಪಿ-ಕಾಂಗ್ರೆಸ್‌ ನಡುವೆ ಸಹಮತ ಏರ್ಪಟ್ಟಿದೆ ಎಂದರು ಮಾಜಿ ಸಿಎಂ.

Advertisement

ಇಂದ್ರನ ಸಿಂಹಾಸನ ಕೊಟ್ಟರೂ ಹೋಗಲ್ಲ: 
ಇಂದ್ರನ ಸಿಂಹಾಸನ ನಮಗೆ ನೀಡಿದರೂ ಮತ್ತೂಮ್ಮೆ ಬಿಜೆಪಿ ಜತೆಗೆ ಮೈತ್ರಿಯೇ ಇಲ್ಲವೆಂದಿದ್ದಾರೆ ಶಿವಸೇನೆ ವಕ್ತಾರ ಸಂಜಯ್‌ ರಾವತ್‌. ಮೂರು ಪಕ್ಷಗಳ ಸಭೆಗೆ ಮುನ್ನ ಮಾತನಾಡಿದ ಅವರು, “ಸಿಎಂ ಹುದ್ದೆಗಾಗಿ ಕಾಯುವುದು ತಪ್ಪಲಿದೆ. ಮಹಾರಾಷ್ಟ್ರದ ಜನರು ಉದ್ಧವ್‌ ಠಾಕ್ರೆ ಸಿಎಂ ಆಗುವುದನ್ನು ಕಾತರದಿಂದ ಕಾಯುತ್ತಿದ್ದಾರೆ’ ಎಂದರು.

“ಇದು ಅಪವಿತ್ರ ಮೈತ್ರಿ’: ಫ‌ಲಿತಾಂಶದ ಬಳಿಕ ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್‌ ಮಾಡಿಕೊಂಡಿರುವ ಮೈತ್ರಿ ಅಪವಿತ್ರ ಮತ್ತು ಅಸಾಂವಿ ಧಾನಿಕ ಎಂದು ಆರೋಪಿಸಿ ಸುಪ್ರೀಂಗೆ ಮತದಾರರೊಬ್ಬರು ಅರ್ಜಿ ಸಲ್ಲಿಸಿದ್ದಾರೆ.

ಇಂದು ಮೈತ್ರಿ ಬಗ್ಗೆ ಫೈನಲ್‌ ಘೋಷಣೆ
ಸಭೆಯ ಬಳಿಕ ಮಾತನಾಡಿದ ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌, ಉದ್ಧವ್‌ ಠಾಕ್ರೆ ಅವರನ್ನು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರಕಟಿಸಲಾಗಿದ್ದರೂ, ಶನಿವಾರ ನಡೆಯಲಿರುವ ಮೂರು ಪಕ್ಷಗಳ ಮತ್ತೂಂದು ಸುತ್ತಿನ ಮಾತುಕತೆ ಬಳಿಕ ಅಂತಿಮ ಘೋಷಣೆ ಮಾಡಲಾಗುತ್ತದೆ ಎಂದರು. “ಹಾಗಿದ್ದರೆ ಉದ್ಧವ್‌ ಠಾಕ್ರೆಯವರೇ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯೇ’ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಶರದ್‌ ಪವಾರ್‌ “ಹಿಂದಿ ಭಾಷೆಯಲ್ಲಿ ಮಾತನಾಡಿದ್ದು ನಿಮಗೆ ಗೊತ್ತಾಗಲಿಲ್ಲವೇ?’ ಎಂದು ಕೋಪದಿಂದ ಹೇಳಿದರು.

ಶಾಸಕರ ಜತೆಗೆ ಸಭೆ: ತ್ರಿ ಪಕ್ಷಗಳ ಸಭೆಗಿಂತ ಮೊದಲು ಶಿವಸೇನೆ ಶಾಸಕರ ಸಭೆ ನಡೆದಿತ್ತು. ಈ ವೇಳೆ ಸರ್ಕಾರ ರಚನೆ ಪ್ರಕ್ರಿಯೆ ಅಂತಿಮ ಹಂತದಲ್ಲಿ ಇದೆ ಎಂದಿದ್ದರು ಉದ್ಧವ್‌ ಠಾಕ್ರೆ. ಪಕ್ಷದ ಶಾಸಕರು ಠಾಕ್ರೆಯವರೇ ಮುಖ್ಯ ಮಂತ್ರಿಯಾಗಬೇಕೆಂದು ಆಗ್ರಹ ಪಡಿಸಿದರು.

ಶಿವಸೇನೆ-ಎನ್‌ಸಿಪಿ- ಕಾಂಗ್ರೆಸ್‌ ಮಾಡಿಕೊಂಡಿರುವ ಮೈತ್ರಿ ಅವಕಾಶವಾದಿತನದ್ದಾಗಿದೆ. ಇದರ ಆಯಸ್ಸು ಕೇವಲ 6ರಿಂದ 7 ತಿಂಗಳು. ಕೇವಲ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಕಾರಣಕ್ಕಾಗಿ ಭಿನ್ನ ಸಿದ್ಧಾಂತದ ಪಕ್ಷಗಳು ಒಗ್ಗೂಡಿರುವುದು ದುರದೃಷ್ಟಕರ.
ನಿತಿನ್‌ ಗಡ್ಕರಿ, ಕೇಂದ್ರ ಸಚಿವ

ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಾಳೆ ಮತ್ತೂಂದು ಸುತ್ತಿನ ಮಾತುಕತೆ ನಡೆಯಲಿದ್ದು,
ಎಲ್ಲವನ್ನೂ ನಾವು ಪ್ರಕಟಿಸಲಿದ್ದೇವೆ.
ಉದ್ಧವ್‌ ಠಾಕ್ರೆ, ಶಿವಸೇನೆ ಮುಖ್ಯಸ್ಥ

ಬಲಾಬಲ
288 ಒಟ್ಟಾರೆ ಬಲ
105 ಬಿಜೆಪಿ
56 ಶಿವಸೇನೆ
54 ಎನ್‌ಸಿಪಿ
44 ಕಾಂಗ್ರೆಸ್‌
29 ಇತರರು

Advertisement

Udayavani is now on Telegram. Click here to join our channel and stay updated with the latest news.

Next