ಮುಂಬೈ:ಕೋವಿಡ್ 19 ಸೋಂಕು ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ರದ್ದುಗೊಂಡಿದ್ದ ಮುಂಬೈ ಸ್ಥಳೀಯ ರೈಲು ಸಂಚಾರ ಫೆಬ್ರುವರಿ 1ರಿಂದ ಪುನರಾರಂಭಗೊಳ್ಳಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಚೇರಿ ಮೂಲಗಳು ಶುಕ್ರವಾರ(ಜನವರಿ 29, 2021) ತಿಳಿಸಿದೆ.
ಇದನ್ನೂ ಓದಿ:ವಿಧಾನ ಪರಿಷತ್ತಿನಲ್ಲಿ ನೀಲಿ ಚಿತ್ರ ವೀಕ್ಷಣೆ? ಸ್ಪಷ್ಟನೆ ನೀಡಿದ ಕಾಂಗ್ರೆಸ್ ಸದಸ್ಯ!
ಸ್ಥಳೀಯ ರೈಲು ಸಂಚಾರ ಪುನರಾರಂಭದೊಂದಿಗೆ ದಿನ ನಿತ್ಯ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರಿಗೆ ಇದರಿಂದ ಅನುಕೂಲ ಕಲ್ಪಿಸಿದಂತಾಗಿದೆ. ಮಹಾರಾಷ್ಟ್ರ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, ಸಾರ್ವಜನಿಕರಿಗೆ ಸ್ಥಳೀಯ ರೈಲು ಬೆಳಗ್ಗೆ 7ರಿಂದ ಮಧ್ಯಾಹ್ನ 12ಗಂಟೆವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 9ರವರೆಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.
ರೈಲು ಸಂಚಾರದ ಸಮಯಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಈ ಬಗ್ಗೆ ಪಶ್ಚಿಮರೈಲ್ವೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವರದಿ ಹೇಳಿದೆ. ಕೋವಿಡ್ ಸೋಂಕಿನ ಪರಿಣಾಮ ಮಾರ್ಚ್ 23ರಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ರಾಜ್ಯದಲ್ಲಿ ಕೋವಿಡ್ ಸಂಬಂಧಿತ ನಿರ್ಬಂಧವನ್ನು ಶುಕ್ರವಾರ(ಜ.29) ಮುಂದುವರಿಸಿ ಆದೇಶ ಹೊರಡಿಸಿದೆ.
ಗುರುವಾರ(ಜನವರಿ 28)ದ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ 20,18, 413 ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, ಈವರೆಗೆ ಸೋಂಕಿನಿಂದಾಗಿ 50, 944 ಮಂದಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.