ಮುಂಬೈ: ಮಹಾರಾಷ್ಟ್ರ ವಿಧಾನ ಸಭೆಯ ಚುನಾವಣಾ ಫಲಿತಾಂಶದಲ್ಲಿ ಅತೀದೊಡ್ಡ ಪಕ್ಷವಾಗಿ ಮೂಡಿಬಂದಿದ್ದ ಭಾರತೀಯ ಜನತಾ ಪಕ್ಷವು ಸರಕಾರ ರಚಿಸುವುದಿಲ್ಲ ಎಂದು ಹೇಳಿಕೊಂಡ ಬೆನ್ನಲ್ಲೇ ರಾಜ್ಯಪಾಲರು ಎರಡನೇ ಅತೀ ದೊಡ್ಡ ಪಕ್ಷವಾಗಿರುವ ಶಿವಸೇನೆಗೆ ಸರಕಾರ ರಚಿಸಲು ಆಹ್ವಾನ ನೀಡಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲರಾಗಿರುವ ಭಗತ್ ಸಿಂಗ್ ಕೋಶ್ಯಾರಿ ಅವರು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ ಏಕನಾಥ ಶಿಂಧೆ ಅವರಿಗೆ ಸರಕಾರ ರಚನೆಗೆ ಹಕ್ಕು ಮಂಡಿಸುವಂತೆ ಸೂಚಿಸಿದ್ದಾರೆ. ಮತ್ತು ಸೋಮವಾರ ರಾತ್ರಿ 7.30 ಗಂಟೆಗೆ ತಮ್ಮನ್ನು ಭೇಟಿಯಾಗಲು ರಾಜ್ಯಪಾಲರು ಶಿವಸೇನೆಗೆ ಸಮಯಾವಕಾಶವನ್ನು ನೀಡಿದ್ದಾರೆ.
ಭಾರತೀಯ ಜನತಾ ಪಕ್ಷವು ಇಂದು ಪತ್ರಿಕಾಗೋಷ್ಠಿ ನಡೆಸಿ, ತನ್ನ ಸ್ವಂತ ಬಲದಲ್ಲಿ ಸರಕಾರ ರಚಿಸುವಷ್ಟು ಸಂಖ್ಯಾಬಲ ತನ್ನಲ್ಲಿ ಇಲ್ಲದೇ ಇರುವುದರಿಂದ ಸರಕಾರ ರಚನೆಗೆ ಹಕ್ಕು ಮಂಡಿಸುವುದಿಲ್ಲ ಎಂದು ಹೇಳಿಕೆ ನೀಡಿತ್ತು.
ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆದಿತ್ತು ಮತ್ತು ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟಗೊಂಡಿತ್ತು. ಅಂದಿನಿಂದ ಈ ದಿನದವರೆಗೂ ಮಹಾರಾಷ್ಟ್ರದಲ್ಲಿ ನೂತನ ಸರಕಾರ ರಚಿಸುವ ಬಿಜೆಪಿ ಮತ್ತು ಶಿವಸೇನೆಯ ಪ್ರಯತ್ನಗಳು ಸಫಲವಾಗದೇ ದೀರ್ಘಕಾಲದ ಮೈತ್ರಿ ಮುರಿದುಬಿದ್ದಿತ್ತು.
ಶನಿವಾರದಂದು ರಾಜ್ಯಪಾಲರು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಮತ್ತು ಮಾಜೀ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಸರಕಾರ ರಚಿಸಲು ಆಹ್ವಾನ ನೀಡಿದ್ದರು.
288 ಸಂಖ್ಯಾಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸರಕಾರ ರಚಿಸಲು 145 ಸ್ಥಾನಗಳ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ 105 ಸ್ಥಾನಗಳನ್ನು ಗೆದ್ದುಕೊಂಡಿರುವ ಬಿಜೆಪಿ ಅತೀದೊಡ್ಡ ಪಕ್ಷವಾಗಿದೆ. 56 ಸೀಟುಗಳನ್ನು ಗೆದ್ದುಕೊಂಡಿರುವ ಶಿವಸೇನೆ ಎರಡನೇ ಸ್ಥಾನಲ್ಲಿದೆ. ಎನ್.ಸಿ.ಪಿ. 54 ಸ್ಥಾನಗಳಲ್ಲಿ ಜಯಗಳಿಸಿದ್ದರೆ ಇದರ ಮಿತ್ರ ಪಕ್ಷ ಕಾಂಗ್ರೆಸ್ 44 ಸ್ಥಾನಗಳಲ್ಲಿ ವಿಜಯಿಯಾಗಿದೆ.