Advertisement

Maharashtra ಸರಕಾರದ ಯೋಜನೆ ಗಡಿ ಭಾಗದ ಹಳ್ಳಿಗಳಲ್ಲಿ ಜಾರಿ; ಆಕ್ರೋಶ

05:16 PM Jan 11, 2024 | Team Udayavani |

ಬೆಳಗಾವಿ: ಮಹಾರಾಷ್ಟ್ರ ಸರಕಾರದ ಜ್ಯೋತಿಬಾ ಫುಲೆ ಆರೋಗ್ಯ ವಿಮೆ ಯೋಜನೆ ಕರ್ನಾಟಕದ ಗಡಿ ಭಾಗದ 865 ಹಳ್ಳಿಗಳಲ್ಲಿ ಜಾರಿ ಮಾಡಲು ಮುಂದಾಗಿರುವ ಮಹಾರಾಷ್ಟ್ರ ಸರಕಾರದ ವಿರುದ್ಧ ರಾಜದ್ರೋಹ ಕಾನೂನಿನ ಅಡಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಕನ್ನಡ ಸಂಘಟನೆಗಳ ಮುಖಂಡರು ಸರಕಾರವನ್ನು ಒತ್ತಾಯಿಸಿದ್ದಾರೆ.

Advertisement

ಈ ಸಂಬಂಧ ಗುರುವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಕನ್ನಡ ಹೋರಾಟಗಾರರು ಗಡಿ ಭಾಗದ 865 ಹಳ್ಳಿಗಳಲ್ಲಿ ಈ ಯೋಜನೆ ಆರಂಭಿಸುವ ಮೂಲಕ ಭಾಷೆ ಆಧಾರದ ಮೇಲೆ ಗಡಿ ಪ್ರದೇಶದಲ್ಲಿರುವ ಮರಾಠಿ ಭಾಷಿಕರನ್ನು ಸೆಳೆಯುವ ಕುತಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒಂದು ರಾಜ್ಯವು ಮತ್ತೊಂದು ರಾಜ್ಯದಲ್ಲಿ ಅನುಮತಿ ಇಲ್ಲದೆ ಯೋಜನೆ ಜಾರಿಗೊಳಿಸುವದು ಒಕ್ಕೂಟದ ವ್ಯವಸ್ಥೆ ಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ನಾಡವಿರೋಧಿ ಚಟುವಟಿಕೆಗಳನ್ನು ಕೈಗೊಳ್ಳುವವರ ವಿರುದ್ಧ ರಾಜದ್ರೋಹ ಕಾನೂನಿನ ಅಡಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖ್ಯವಾಗಿ ಮಹಾರಾಷ್ಟ್ರ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ರುವ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದಲ್ಲಿ ಈ ಯೋಜನೆಯ ಅಂಕಿಅಂಶಗಳನ್ನು ಸೇರ್ಪಡೆ ಮಾಡುವ ಕುತಂತ್ರವಿದೆ. ಈ ವಿಷಯದಲ್ಲಿ ನ್ಯಾಯಾಲಯದ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಕಾರಣ ಯಾವುದೇ ಹಂತದಲ್ಲೂ ಈ ಯೋಜನೆ ಮುಂದುವರಿಯಲು ಬಿಡಬಾರದು ಎಂದು ಆಗ್ರಹಿಸಿದರು.

ಕರ್ನಾಟಕ ಸರಕಾರ ಈ ವಿಷಯದಲ್ಲಿ ಮೌನ ವಹಿಸಿರುವದು ಸರಿಯಲ್ಲ. ಇದೇ ರೀತಿಯ ಉದಾಸೀನ ಮನೋಭಾವ ಮುಂದುವರಿದರೆ ನಮಗೆ ಅಪಾಯ ತಪ್ಪಿದ್ದಲ್ಲ. ಸಚಿವರು ಹಾಗೂ ಸರಕಾರ ತಮ್ಮ ಮೌನ ಮುರಿದು ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಕನ್ನಡ ಹೋರಾಟಗಾರರು ಒತ್ತಾಯಿಸಿದರು.

Advertisement

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಬೆಳಗಾವಿಯಲ್ಲಿ ಮಹಾರಾಷ್ಟ್ರ ಸರಕಾರದ ಪರವಾಗಿ ತೆರದಿರುವ ನಾಲ್ಕು ಸೇವಾ ಕೇಂದ್ರಗಳಿಗೆ ನೋಟೀಸ್ ನೀಡಲಾಗುವದು. ಇದಲ್ಲದೆ ಈ ಆರೋಗ್ಯ ವಿಮೆ ಯೋಜನೆಯಡಿ ಚಿಕಿತ್ಸೆ ನೀಡಲು ಮುಂದಾಗಿರುವ ಎರಡು ಖಾಸಗಿ ಆಸ್ಪತ್ರೆಗೆ ಸಹ ನೋಟಿಸ್ ನೀಡುತ್ತೇವೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next