ಮುಂಬೈ : ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿರುವ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ.
ಅನಿಲ್ ದೇಶಮುಖ್ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮಾಡಿರುವ ಹಫ್ತಾ ವಸೂಲಿ ಆರೋಪದ ಕುರಿತು ಪ್ರಾಥಮಿಕ ತನಿಖೆ ನಡೆಸಲು ಸಿಬಿಐಗೆ ಬಾಂಬೆ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ. ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೆ ಅನಿಲ್ ದೇಶಮುಖ್ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದೀಗ ಬಾಂಬೆ ಹೈಕೋರ್ಟ್ ಆದೇಶಕ್ಕೆ ಸವಾಲು ಎಸೆಯುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ವರದಿಗಳ ಪ್ರಕಾರ ಹಿರಿಯ ನ್ಯಾಯವಾದಿ ಡಾ. ಅಭಿಷೇಕ್ ಮನು ಸಿಂಘ್ವಿ ಅವರು ಮಹಾರಾಷ್ಟ್ರ ಸರ್ಕಾರದ ಪರ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಲಿದ್ದಾರಂತೆ.
ಇನ್ನು ಅಂಬಾನಿ ಮನೆ ಎದುರು ಸ್ಫೋಟಕ ತುಂಬಿದ ವಾಹನ ಪತ್ತೆಯಾದ ಘಟನೆ ಬಳಿಕ ಮಹಾರಾಷ್ಟ್ರ ರಾಜಕೀಯದಲ್ಲಿ ಸಾಕಷ್ಟು ಬೆಳವಣೆಗೆ ಆಗುತ್ತಿದೆ. ಈ ಪ್ರಕರಣದ ವಿಚಾರಣೆ ಸರಿಯಾಗಿ ನಡೆಸಿಲ್ಲ ಎನ್ನುವ ಆರೋಪದಲ್ಲಿ ಪರಮ್ ಬೀರ್ ಸಿಂಗ್ ಅವರನ್ನು ಪೊಲೀಸ್ ಆಯಕ್ತರ ಹುದ್ದೆಯಿಂದ ಬೇರೆಡೆ ವರ್ಗಾಯಿಸಲಾಯಿತು. ಇದಾದ ನಂತರ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಪರಮ್ ಬೀರ್ ಸಿಂಗ್ ಭ್ರಷ್ಟಾಚಾರ ಆರೋಪ ಮಾಡಿದರು. ಬಾರ್, ರೆಸ್ಟೋರೆಂಟ್‍ಗಳಿಂದ ಪ್ರತಿ ತಿಂಗಳು 100 ಕೋಟಿ ರೂ. ಹಪ್ತಾ ವಸೂಲಿ ಮಾಡುವಂತೆ ಗೃಹ ಸಚಿವರು ಒತ್ತಡ ಹೇರಿದ್ದರು ಎಂದು ಪರಮ್ ಸಿಂಗ್ ಆರೋಪಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ದೇಶಮುಖ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಉನ್ನತ ಮಟ್ಟದ ಸಮಿತಿಗೆ ವಹಿಸಿತ್ತು. ಈ ಪ್ರಕರಣದ ತನಿಖೆ ನಡೆದಿರುವಾಗ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿಸಿದೆ. ಆದರೆ, ತಕ್ಷಣಕ್ಕೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವ ಅಗತ್ಯವಿಲ್ಲ ಹದಿನೈದು ದಿನಗಳ ಒಳಗೆ ಪ್ರಾಥಮಿಕ ತನಿಖೆ ಪೂರ್ಣಗೊಳಿಸುವಂತೆ ಸೂಚಿಸಿದೆ.