ಮುಂಬಯಿ: ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ತಾರಾಪುರದಲ್ಲಿರುವ ತಾರಾ ನೈಟ್ರೇಟ್ ಎಂಬ ರಾಸಾಯನಿಕ ಉತ್ಪಾದನ ಘಟಕದಲ್ಲಿ ಶನಿವಾರ ರಾತ್ರಿ ಸ್ಫೋಟವೊಂದು ಸಂಭವಿಸಿದ್ದು, ಎಂಟು ಮಂದಿ ಮೃತಪಟ್ಟು, ಐವರು ಮಂದಿ ಗಾಯಗೊಂಡಿದ್ದಾರೆ.
ಘಟಕದಲ್ಲಿದ್ದ ರಿಯಾಕ್ಟರ್ ಸ್ಫೋಟಗೊಂಡಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸುನೀಗಿದವರೆಲ್ಲರೂ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಪುರುಷ ಸಿಬಂದಿ. ಸ್ಫೋಟದ ಅನಂತರ ಘಟಕದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದು, ಅದರಲ್ಲಿ ಇನ್ನಿತರ ಸಿಬಂದಿ ಸಿಲುಕಿದ್ದಾರೆ ಎಂದು ಅಗ್ನಿಶಾಮಕ ದಳದ ಸಿಬಂದಿ ತಿಳಿಸಿದ್ದಾರೆ.
5 ಲಕ್ಷ ರೂ. ಪರಿಹಾರ :
ಘಟನೆಯ ಬಗ್ಗೆ ಖೇದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ರಕ್ಷಣಾ ಕಾರ್ಯಕ್ಕೆ ಎನ್‌ಡಿಆರ್‌ಎಫ್ ಯೋಧರನ್ನು ನಿಯೋಜಿಸಲಾಗಿದೆ. ಸ್ಫೋಟದ ಸದ್ದು 30 ಕಿ.ಮೀ. ದೂರದವರೆಗೆ ಕೇಳಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.