ನವದೆಹಲಿ: ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಬ್ಯಾಗ್ ಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ಶುಕ್ರವಾರ (ನ.15) ಪರಿಶೀಲಿಸಿದರು. ಚುನಾವಣೆಯ ನಡುವೆ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಉನ್ನತ ಮಟ್ಟದ ರಾಜಕೀಯ ನಾಯಕರ ಲಗೇಜ್ ಗಳ ಸರಣಿ ಪರೀಕ್ಷೆ ನಡೆಯುತ್ತಿರುವಂತೆ ಶಾ ಅವರ ಬ್ಯಾಗ್ ಕೂಡಾ ಪರೀಕ್ಷೆಗೆ ಒಳಗಾಗಿದೆ.
ಟ್ವಿಟರ್ ನಲ್ಲಿನ ಪೋಸ್ಟ್‌ನಲ್ಲಿ, ಶಾ ಅವರು ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಹಿಂಗೋಲಿ ವಿಧಾನಸಭಾ ಸ್ಥಾನಕ್ಕೆ ಆಗಮಿಸಿದಾಗ ಚುನಾವಣಾ ಅಧಿಕಾರಿಗಳು ಚಾಪರ್ ನಲ್ಲಿ ತಮ್ಮ ಲಗೇಜ್‌ಗಳನ್ನು ಪರಿಶೀಲಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
“ಇಂದು, ಮಹಾರಾಷ್ಟ್ರದ ಹಿಂಗೋಲಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಚುನಾವಣಾ ಆಯೋಗದ ಅಧಿಕಾರಿಗಳು ನನ್ನ ಹೆಲಿಕಾಪ್ಟರನ್ನು ಪರಿಶೀಲಿಸಿದರು. ಬಿಜೆಪಿ ನ್ಯಾಯಯುತ ಚುನಾವಣೆ ಮತ್ತು ಆರೋಗ್ಯಕರ ಚುನಾವಣಾ ವ್ಯವಸ್ಥೆಯನ್ನು ನಂಬುತ್ತದೆ ಮತ್ತು ಗೌರವಾನ್ವಿತ ಚುನಾವಣಾ ಆಯೋಗದ ಎಲ್ಲಾ ನಿಯಮಗಳನ್ನು ಅನುಸರಿಸುತ್ತದೆ” ಎಂದು ಅವರು ಹೇಳಿದರು.
“ನಾವೆಲ್ಲರೂ ಆರೋಗ್ಯಕರ ಚುನಾವಣಾ ವ್ಯವಸ್ಥೆಗೆ ಕೊಡುಗೆ ನೀಡಬೇಕು. ಭಾರತವನ್ನು ವಿಶ್ವದ ಪ್ರಬಲ ಪ್ರಜಾಪ್ರಭುತ್ವವಾಗಿ ಇರಿಸುವಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು” ಎಂದು ಅವರು ಹೇಳಿದರು.
ಕಳೆದ ಐದು ದಿನಗಳಲ್ಲಿ ಪಶ್ಚಿಮ ರಾಜ್ಯದಲ್ಲಿ ಚುನಾವಣಾ ಅಧಿಕಾರಿಗಳು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಹಾರಾಷ್ಟ್ರ ಅಧ್ಯಕ್ಷ ನಾನಾ ಪಟೋಲೆ, ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮುಖ್ಯಸ್ಥ ಉದ್ಧವ್ ಠಾಕ್ರೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಡಿಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವಾರು ರಾಜಕಾರಣಿಗಳ ಬ್ಯಾಗ್ ಗಳನ್ನು ಪರೀಕ್ಷಿಸಿದ್ದಾರೆ.