ಕಲ್ಯಾಣ್: ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ತಮ್ಮ ಮಾತೃಭೂಮಿಯ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜತೆಗೆ ಕರ್ಮಭೂಮಿಯ ಕಲೆ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡು ಸಾಮರಸ್ಯದ ಬದುಕು ಸಾಗಿಸುತ್ತಾರೆ. ಕನ್ನಡಿಗರ ಇಂತಹ ಕಾರ್ಯ ಅಭಿನಂದನೀಯ ಹಾಗೂ ಅನುಕರಣೀಯ ಎಂದು ಖ್ಯಾತ ಮರಾಠಿ ವಿಚಾರವಾದಿ, ಲೇಖಕ ಸದಾನಂದ ಫಣಸೆ ಹೇಳಿದ್ದಾರೆ. ಅವರು ಮೇ 1ರಂದು ಸಂಜೆ ಕಲ್ಯಾಣ್ ಪಶ್ಚಿಮದ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಕಲ್ಯಾಣ್ ಕರ್ನಾಟಕ ಸಂಘ ಆಯೋಜಿಸಿದ ಮಹಾರಾಷ್ಟ್ರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ನಮ್ಮಲ್ಲಿ ಉತ್ತಮ ಸಂಸ್ಕಾರ ಇದ್ದರೆ ಮಾತ್ರ ನಾವು ಉತ್ತಮ ಕಾರ್ಯ ಮಾಡಲು ಸಾಧ್ಯ. ಆದ್ದರಿಂದ ನಾವು ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜತೆಗೆ ರಾಷ್ಟ್ರಾಭಿಮಾನ ಮೂಡಿಸಬೇಕು ಕಲ್ಯಾಣ್ ಕರ್ನಾಟಕ ಸಂಘ ಆಚರಿಸುತ್ತಿರುವ ಮಹಾರಾಷ್ಟ್ರ ದಿನಾಚರಣೆಯಂತೆ ಕರ್ನಾಟಕದಲ್ಲಿರುವ ಮರಾಠಿ ಬಾಧವರು ಕರ್ನಾಟಕ ರಾಜ್ಯೋತ್ಸವ ಆಚರಿಸಬೇಕು ಎಂದು ನುಡಿದು ಶುಭ ಕೋರಿದರು.
ಇನ್ನೋರ್ವ ಅತಿಥಿ ಪ್ರತಿಷ್ಠಿತ ಶೇಟೆ ಶಿಕ್ಷಣ ಸಂಸ್ಥೆಯ ಸಂಚಾಲಕ ಅವಿರತ ಶೇಟೆ ಅವರು ಮಾತನಾಡುತ್ತ, ಕಲ್ಯಾಣ್ ನಗರದ ಕಲ್ಯಾಣಕ್ಕಾಗಿ ಕನ್ನಡಿಗರ ಕೊಡುಗೆ ಅಪಾರ. ಅವರ ಭಾಷಾಭಿಮಾನ ಹಾಗೂ ನಾಡುನುಡಿಯ ಬಗ್ಗೆ ಇರುವ ಕಳಕಳಿಯ ಜತೆಗೆ ಹುಟ್ಟಿದ ಹಾಗೂ ಬೆಳೆದ ಪರಿಸರದಲ್ಲಿ ಎಲ್ಲರೊಳಗೊಂದಾಗಿ ಬದುಕುವ ಭಾವನೆಗೆ ಅಭಿನಂದಿಸುವೆ. ಕನ್ನಡಿಗರ ಮಾತೃಭೂಮಿ ಹಾಗೂ ಕರ್ಮಭೂಮಿಯ ಮೇಲಿನ ಪ್ರೇಮ ನಿರಂತರವಾಗಿರಲಿ. ಅವರ ಸಾಧನೆ ನಮ್ಮೆಲ್ಲರಿಗೂ ಅನುಕರಣೀಯವಾಗಲಿದೆ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ| ಮುಕೇಶ್ ಶಹಾ (ವೈದ್ಯಕೀಯ), ಡಿ’ಸೋಜಾ ಜಾನ್ ಎಂ. ಝೆಡ್ (ಶಿಕ್ಷಣ ಹಾಗೂ ಸಾಮಾಜಿಕ) ವಿಲಾಸ್ ವಾಘ… (ಕ್ರೀಡೆ) ಅವರನ್ನು ಶಾಲು ಹೊದೆಸಿ, ಫಲಪುಷ್ಪ ಹಾಗೂ ನೆನಪಿನ ಕಾಣಿಕೆ ನೀಡಿ ಗಣ್ಯರು ಸಮ್ಮಾನಿಸಿದರು. ಸಮ್ಮಾನಿತರು ತಮ್ಮ ಮನದಾಳದ ಮಾತುಗಳನ್ನಾಡಿದರು.
ಕಾರ್ಯಕ್ರಮದ ಪ್ರಾಯೋಜಕ ಹಾಗೂ ಸಂಯೋಜಕ ಡಾ| ಸುರೇಂದ್ರ ಶೆಟ್ಟಿ ಮಹಾರಾಷ್ಟ್ರ ದಿನಾಚರಣೆಯ ಉದ್ದೇಶವನ್ನು ವಿವರಿಸಿದರೆ, ಕಲ್ಯಾಣ್ ಕರ್ನಾಟಕ ಸಂಘದ ಸಂಸ್ಥಾಪಕ ಅಧ್ಯಕ್ಷ ನಂದಾ ಶೆಟ್ಟಿ ಅವರು ಸಂಘದ ಒಂದೂವರೆ ದಶಕಗಳ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಸಂಘದ ಅಧ್ಯಕ್ಷ ಗುಣಪಾಲ್ ಹೆಗ್ಡೆ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿ ಮಹಾರಾಷ್ಟ್ರದ ಗತ ವೈಭವದ ಸಂಪೂರ್ಣ ಚಿತ್ರಣವನ್ನು ಪರಿಚಯಿಸಿದರು.
ಮಹಾರಾಷ್ಟ್ರದ ಅಮೋಘ ಸಂಸ್ಕೃತಿ ಹಾಗೂ ಕಲೆಯನ್ನು ಪರಿಚಯಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಗೆದ್ದವು.
ಸಂಘದ ಅಧ್ಯಕ್ಷ ಗೋಪಾಲ ಹೆಗ್ಡೆ, ಗೌರವ ಕಾರ್ಯದರ್ಶಿ ನ್ಯಾಯವಾದಿ ನೂತನ್ ಹೆಗ್ಡೆ, ಉಪಾಧ್ಯಕ್ಷ ಕೆ. ಎನ್. ಸತೀಶ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದರ್ಶನಾ ಸೋನ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಗಣ್ಯರಾದ ಆನಂದ ಶೆಟ್ಟಿ ಎಕ್ಕಾರು, ವಾಮನ ಶೆಟ್ಟಿ, ಉಷಾ ವಾಳಿಂಜ, ಚಿತ್ರಾ ಶೆಟ್ಟಿ, ವೆಂಕಟೇಶ ಪೈ, ಶೈಲೇಶ್ ಶಹಾ, ಶಾಂತಿಲಾಲ್ ಶಹಾ, ಸುಹಾಸ್ ಕುಲಕರ್ಣಿ ಅವರು ಭಾಗವಹಿಸಿದ್ದರು. ಕೆ.ಎನ್. ಸತೀಶ್ ಮತ್ತು ಸಂಗಡಿಗರ ಪ್ರಾರ್ಥನೆ ಹಾಗೂ ಮಹಾರಾಷ್ಟ್ರ ಗೀತೆಯೊಂದಿಗೆ ಜ್ಯೋತಿ ಬೆಳಗಿಸುವ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ವಾತಿ ನಾತು ಕಾರ್ಯಕ್ರಮ ನಿರೂಪಿಸಿ ಅತಿಥಿ ಗಣ್ಯರನ್ನು ಪರಿಚಯಿಸಿದರೆ, ಯು.ಡಿ. ಮಲ್ಯ ವಂದಿಸಿದರು.
ಚಿತ್ರ, ವರದಿ: ಗುರುರಾಜ ಪೋತನೀಸ್