ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಆರ್ಭಟ ಮುಂದುವರೆದಿದ್ದು ಶನಿವಾರದ ವೇಳೆಗೆ (16-05-2020) ಈ ರಾಜ್ಯದಲ್ಲಿ ಸೋಂಕಿತರ ಪ್ರಮಾಣ 30 ಸಾವಿರದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 1,606 ಹೊಸ ಪ್ರಕರಣಗಳು ದಾಖಲಾಗಿದ್ದು 67 ಜನರು ಸಾವನ್ನಪ್ಪಿದ್ದಾರೆ.
ದೇಶದಲ್ಲೇ ವೈರಸ್ ಆರ್ಭಟಕ್ಕೆ ಅತೀ ಹೆಚ್ಚು ನಲುಗಿರುವ ರಾಜ್ಯವೆಂಬ ಕುಖ್ಯಾತಿಗೆ ಮಹಾರಾಷ್ಟ್ರ ಪಾತ್ರವಾಗಿದ್ದು, ಮುಂಬೈನಲ್ಲಿ ನಗರವೊಂದರಲ್ಲೇ 18 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಶನಿವಾರ ಮುಂಬೈನಲ್ಲಿ 884 ಹೊಸ ಪ್ರಕರಣಗಳು ಕಂಡುಬಂದಿದ್ದು 41 ಜನರು ಅಸುನೀಗಿದ್ದಾರೆ. ಒಟ್ಟಾರೆ ಇಲ್ಲಿ ಸಾವನ್ನಪ್ಪಿದವರ ಪ್ರಮಾಣ 696ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದ ಸೋಂಕಿತರಲ್ಲಿ 7,088 ಜನರು ಗುಣಮುಖರಾಗಿದ್ದು 3,34,558 ಜನರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಸುಮಾರು 17,048 ಜನರು ಶಿಕ್ಷಣ ಸಂಸ್ಥೆಗಳಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಸರ್ಕಾರದ ಅಧಿಕೃತ ಪ್ರಕಟನೆ ತಿಳಿಸಿದೆ.
ಭಾರತದ ಕೋವಿಡ್ 19 ಪ್ರಕರಣಗಳ ಸಂಖ್ಯೆ ಚೀನಾವನ್ನು ಮೀರಿಸಿದ್ದು, ಒಟ್ಟಾರೆ 85 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2,752 ಜನರು ಮೃತರಾಗಿದ್ದು, 30,152 ಜನರು ಗುಣಮುಖರಾಗಿದ್ದಾರೆ.