ಮುಂಬೈ: ಮಾರಣಾಂತಿಕ ಕೋವಿಡ್19 ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ಲಾಕ್ ಡೌನ್ ಉಲ್ಲಂಘಿಸಿ ಹೊರಗೆ ತಿರುಗಾಡುತ್ತಿದ್ದ ಮೂವರು ವ್ಯಕ್ತಿಗಳಿಗೆ ಮಹಾರಾಷ್ಟ್ರದ ಬಾರಾಮತಿ ಕೋರ್ಟ್ ಮೂರು ದಿನಗಳ ಕಾಲ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದೆ. ಲಾಕ್ ಡೌನ್ ಆದೇಶ ಉಲ್ಲಂಘಿಸಿದವರಿಗೆ ಶಿಕ್ಷೆಯಾಗುತ್ತಿರುವ ಮೊದಲ ಪ್ರಕರಣ ಇದಾಗಿದೆ.
ಬಾರಾಮತಿ ಕೋರ್ಟ್ ನ್ಯಾಯಾಧೀಶ ಜೆ.ಜೆ.ಬಾಚುಲ್ಕರ್ ಅವರು, ಆರೋಪಿಗಳಾದ ಅಫ್ಜಲ್ ಅತ್ತಾರ್ (39ವರ್ಷ), ಚಂದ್ರಕುಮಾರ್ ಶಾ (38ವರ್ಷ) ಹಾಗೂ ಅಕ್ಷಯ್ ಶಾ(32ವರ್ಷ)ಗೆ ಮೂರು ದಿನ ಜೈಲುಶಿಕ್ಷೆ ವಿಧಿಸಿ ಪ್ರತಿಯೊಬ್ಬರಿಗೂ 500 ರೂಪಾಯಿ ದಂಡ ವಿಧಿಸಿದ್ದಾರೆ.
ಯಾವುದೇ ಉದ್ದೇಶ ಇಲ್ಲದೇ ಪುಣೆ ಜಿಲ್ಲೆಯ ಬಾರಾಮತಿ ನಗರದಲ್ಲಿ ತಿರುಗಾಡುತ್ತಿದ್ದ ಮೂವರು ಯುವಕರ ವಿರುದ್ಧ ಐಪಿಸಿ ಸೆಕ್ಷನ್ 188ರ ಪ್ರಕಾರ ದೂರು ದಾಖಲಿಸಲಾಗಿತ್ತು. ಅಪರಾಧ ದಂಡಸಂಹಿತೆ ಸೆಕ್ಷನ್ 144ರ ಪ್ರಕಾರ ಜಾರಿಗೊಳಿಸಿದ್ದ ಆದೇಶ ಹಾಗೂ ಲಾಕ್ ಡೌನ್ ಉಲ್ಲಂಘಿಸಿ ತಿರುಗಾಡಿದ್ದಕ್ಕೆ ಪ್ರಕರಣ ದಾಖಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದೇಶ ಉಲ್ಲಂಘಿಸಿದ್ದಕ್ಕೆ ಕಡಿಮೆ ಪ್ರಮಾಣದ ಶಿಕ್ಷೆ ಕೋರ್ಟ್ ವಿಧಿಸಿದೆ. ಇನ್ನು ಮುಂದೆ ತಪ್ಪೆಸಗಿದರೆ ಆರೋಪಿಗಳ ಪಾಸ್ ಪೋರ್ಟ್ ಹಾಗೂ ಇತರ ಲೈಸೆನ್ಸ್ ಗಳನ್ನು ವಶಕ್ಕೆ ಪಡೆಯಲು ಅವಕಾಶ ಇರುತ್ತದೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಪುಣೆ ಗ್ರಾಮಾಂತರ ಪ್ರದೇಶದಲ್ಲಿ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಹೊರಬಂದ 250 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.