ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ವಿರುದ್ಧ ಎನ್ ಸಿಪಿ ಮಹಿಳಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಘೋಷಣೆ ಕೂಗಿರುವ ಘಟನೆ ಭಾನುವಾರ ಸೋಲಾಪುರ್ ನಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ವಿವರಿಸಿದೆ.
ಇದಕ್ಕೆ ಕಾರಣ: ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಉತ್ಪನ್ನಗಳ ಪ್ರಚಾರಕ್ಕಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
ಪತಂಜಲಿ ಆಯುರ್ವೇದ ತಯಾರಿಸುವ ಉತ್ಪನ್ನಗಳನ್ನು ಮಹಿಳಾ ಸ್ವ ಸಹಾಯ ಸಂಘಗಳು ಕೂಡಾ ತಯಾರಿಸುತ್ತಿವೆ, ಆದರೆ ಪತಂಜಲಿ ಉತ್ಪನ್ನ ಮಾರಾಟಕ್ಕೆ ಯಾಕೆ ಅವಕಾಶ ಮಾಡಿಕೊಡುತ್ತಿದ್ದೀರಿ, ಆದರೆ ನಾವು ಮಾಡಿದ್ದ ಉತ್ಪನ್ನಕ್ಕೆ ಯಾಕೆ ಪ್ರಚಾರ ಕೊಡುತ್ತಿಲ್ಲ ಎಂದು ಪ್ರಶ್ನಿಸಿ ಎನ್ ಸಿಪಿ ಮಹಿಳಾ ಕಾರ್ಯಕರ್ತೆಯರು ಕಾರ್ಯಕ್ರಮದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕೆಲ ತಿಂಗಳ ಹಿಂದೆ ಅಮೃತಾ ಫಡ್ನವೀಸ್ ಅವರು ಕಾರ್ಯಕ್ರಮವೊಂದರ ಭಾಷಣದಲ್ಲಿ ಪತಂಜಲಿ ಉತ್ಪನ್ನಗಳ ಬಗ್ಗೆ ಜನರು ಕುರುಡು ನಂಬಿಕೆ ಹೊಂದಿದ್ದಾರೆ. ಈ ಮೂಲಕ ದೇಶದ ಆದಾಯ ಹೆಚ್ಚಳಕ್ಕೆ ನೆರವು ನೀಡುತ್ತಿದೆ ಎಂದು ಹೇಳಿದ್ದರು.
ಪ್ರತಿಭಟನಾ ನಿರತ ಮಹಿಳೆಯರನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಲಾಯಿತು. ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ನಟಿ, ಸಂಸದೆ ಹೇಮಾ ಮಾಲಿನಿ ಕೂಡಾ ಭಾಗವಹಿಸಿದ್ದರು.