ಮುಂಬಯಿ: ಡೆಲ್ಟಾ ರೂಪಾಂತರಿ ಕೋವಿಡ್ 19 ಮೂರನೇ ಅಲೆಯ ಕಳವಳದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಮತ್ತೆ ಶ್ರೇಣಿಕೃತ ವ್ಯವಸ್ಥೆಯಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಸಾಧ್ಯತೆ ಇದ್ದಿರುವುದಾಗಿ ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?
ಕೋವಿಡ್ 19 ಮೂರನೇ ಅಲೆಯ ಸಂದರ್ಭದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾದಲ್ಲಿ ಮತ್ತೆ ಕೋವಿಡ್ ಲಾಕ್ ಡೌನ್ ಜಾರಿಗೊಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ರಾಜ್ಯ ಪರಿಹಾರ ಮತ್ತು ಪುನರ್ವಸತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಅಸೀಮ್ ಗುಪ್ತಾ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದನ್ನೂ ನಿರ್ಲಕ್ಷಿಸುವಂತಿಲ್ಲ. ಒಂದು ವೇಳೆ ಎಚ್ಚರಿಕೆ ಕರೆ ಗಂಟೆ ರೀತಿಯಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಸರ್ಕಾರ ಭಾವಿಸಿದರೆ, ಆ ಸಂದರ್ಭದಲ್ಲಿ ತಕ್ಷಣವೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಗುಪ್ತಾ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಈಗಾಗಲೇ ಎರಡನೇ ಹಂತದ ಲಾಕ್ ಡೌನ್ ಅನ್ನು ಮಹಾರಾಷ್ಟ್ರದಲ್ಲಿ ಐದು ಹಂತಗಳಲ್ಲಿ ಸಡಿಲಿಕೆ ಮಾಡಲಾಗುತ್ತಿದೆ. ಅಲ್ಲದೇ ರಾಜ್ಯದಲ್ಲಿ ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಮುಂದುವರಿಯಲಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.