ಇಂದೋರ್/ಮುಂಬೈ: ಪಾಕಿಸ್ತಾನ, ಚೀನ ಮತ್ತು ಹಾಂಕಾಂಗ್‌ನಲ್ಲಿ ತರಬೇತಿ ಪಡೆದ ಶಂಕಿತ ಉಗ್ರನನ್ನು ಮಧ್ಯಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತನನ್ನು ಸರ್ಫಾರಾಜ್ ಮೆಮನ್ (40) ಎಂದು ಗುರುತಿಸಲಾಗಿದೆ.
ಆತನಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆಗೆ ನೇರ ಲಿಂಕ್ ಮತ್ತು ಉಗ್ರ ಸಂಘಟನೆಗಳ ಜತೆಗೆ ಸಂಪರ್ಕವಿದೆ. ಇದೇ ವೇಳೆ, ಆತ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ ಚೀನ ಮೂಲದ ತನ್ನ ಪತ್ನಿಯೇ ಪೊಲೀಸರಿಗೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿ ಬಂಧನವಾಗುವಂತೆ ಮಾಡಿದ್ದಾಳೆ. ನಾವಿಬ್ಬರೂ ವಿಚ್ಛೇದನ ಪಡೆಯುವ ಪ್ರಕ್ರಿಯೆಯಲ್ಲಿ ಇದ್ದೇವೆ. ಜತೆಗೆ ಪತ್ನಿ ಪರ ವಕೀಲನ ಜತೆಗೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಇಂಥ ಸಂಚು ರೂಪಿಸಿದ್ದಾಳೆ ಎಂದು ಅಲವತ್ತುಗೊಂಡಿದ್ದಾನೆ.
ಮುಂಬೈ ಪೊಲೀಸರು ಮತ್ತು ಎನ್‌ಐಎ ಮಧ್ಯಪ್ರದೇಶ ಪೊಲೀಸರಿಗೆ ಸರ್ಫಾರಾಜ್ ಮೆಮನ್ ಬಗ್ಗೆ ಸುಳಿವು ನೀಡಿದ್ದರು. ಅದರ ಆಧಾರದಲ್ಲಿ ಆತನನ್ನು ಬಂಧಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ, “ಇಂದೋರ್‌ನ ಚಂದನ್ ನಗರ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ ಸಫ್ìರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಈತ 2005ರಿಂದ 2018ರವರೆಗೆ ಚೀನಾ ಮತ್ತು ಹಾಂಕಾಂಗ್‌ನಲ್ಲಿ ನೆಲೆಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ತನಿಖೆಗಾಗಿ ಎನ್‌ಐಎ ಅಧಿಕಾರಿಗಳು ಈತನ ವಿಚಾರಣೆ ನಡೆಸುತ್ತಿದ್ದಾರೆ,’ ಎಂದು ತಿಳಿಸಿದ್ದಾರೆ.
“ಎಲ್ಲಾ ಕೋನಗಳಿಂದಲೂ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಎನ್‌ಐಎ ಮತ್ತು ಮುಂಬೈ ಪೊಲೀಸರು ಈತನ ಬಗ್ಗೆ ಮಾಹಿತಿ ನೀಡಿ ಅಲರ್ಟ್ ಮಾಡಿದ್ದರು. ಮುಂಬೈನಿಂದ ಈತ ಇಂದೋರ್‌ಗೆ ಬಂದಿದ್ದಾನೆ. ಹೆಚ್ಚಿನ ಮಾಹಿತಿಯು ತನಿಖೆ ನಂತರ ತಿಳಿಯಲಿದೆ,’ ಎಂದು ಇಂದೋರ್ ಡಿಸಿಪಿ ರಜತ್ ಸಲೆಕಾ ವಿವರಿಸಿದ್ದಾರೆ.