Advertisement

Maharashtra; ಚುನಾವಣ ಅಖಾಡ ಸಿದ್ದ: ಬಿಜೆಪಿ ಪಾಲಿಗೆ ಈ ಬಾರಿ ಭಾರೀ ಸವಾಲಿನ ಸ್ಥಿತಿ!

11:24 AM Oct 02, 2024 | ವಿಷ್ಣುದಾಸ್ ಪಾಟೀಲ್ |

ಮಹಾರಾಷ್ಟ್ರದಲ್ಲಿ ಸದ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಷ್ಟೇ ಬಾಕಿ ಉಳಿದಿದ್ದು ಚುನಾವಣ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ನವೆಂಬರ್ ಅಂತ್ಯದ ಒಳಗೆ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಚಟುವಟಿಕೆ ಆರಂಭಿಸಿವೆ. ಇನ್ನೇನು ಪಕ್ಷಾಂತರ ಪರ್ವವೂ ನಿರೀಕ್ಷೆಯಂತೆ ಹೆಚ್ಚಾಗುವ ಲಕ್ಷಣಗಳಿವೆ. ನಾಯಕರು ಮಾತ್ರವಲ್ಲದೆ ತಳಮಟ್ಟದ ಸಾವಿರಾರು ಕಾರ್ಯಕರ್ತರು ಯಾರಿಗೆ ನಿಷ್ಠೆ ತೋರುವುದು ಎನ್ನುವ ಗೊಂದಲದಲ್ಲಿಯೂ ಇದ್ದಾರೆ. ಪ್ರಮುಖ ಪಕ್ಷಗಳ ವಿಭಜನೆ, ಲೋಕಸಭಾ ಚುನಾವಣೆಯಲ್ಲಿನ ಅನಿರೀಕ್ಷಿತ ಫಲಿತಾಂಶ ಈ ಮಟ್ಟಿಗಿನ ಗೊಂದಲಕ್ಕೆ ಕಾರಣವಾಗಿದೆ.

Advertisement

ಮುಂಬರುವ ಚುನಾವಣೆ ಆಡಳಿತಾರೂಢ ಬಿಜೆಪಿ-ಶಿವಸೇನೆ-ಎನ್‌ಸಿಪಿ(ಅಜಿತ್ ಪವರ್) ಮೈತ್ರಿಕೂಟ ಮತ್ತು ಕಾಂಗ್ರೆಸ್‌, ಶಿವಸೇನೆ (UBT) ಮತ್ತು ಶರದ್‌ ಪವಾರ್‌ ಅವರ ಎನ್‌ಸಿಪಿ ಬಣವನ್ನು ಒಳಗೊಂಡ ವಿಪಕ್ಷಗಳ ಮಹಾ ವಿಕಾಸ್‌ ಅಘಾಡಿ (MVA) ನಡುವೆ ಬಲು ದೊಡ್ಡ ಸಮರಕ್ಕೆ ಅಖಾಡ ಸಿದ್ಧವಾಗಿದೆ.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಎಂವಿಎ ಮಹಾರಾಷ್ಟ್ರದ 48 ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಗೆದ್ದು ಭಾರೀ ಶಾಕ್ ನೀಡಿರುವುದು ಮಹಾ ವಿಕಾಸ್‌ ಅಘಾಡಿಗೆ ವಿಶ್ವಾಸ ಹೆಚ್ಚಿಸಿದ್ದು, ನಾಯಕತ್ವ ಸೇರಿ ಹಲವು ವಿಚಾರಗಳು ಬಿಜೆಪಿ ಪಾಳಯಕ್ಕೆ ಸವಾಲಾಗಿ ಪರಿಣಮಿಸಿದೆ

ಬಿಜೆಪಿಗೆ ವಿಪಕ್ಷಕ್ಕಿಂತ ಸ್ವಪಕ್ಷೀಯರದ್ದೇ ಸವಾಲು

Advertisement

ಶಿವಸೇನೆ(ಶಿಂಧೆ ಬಣ )ಹಿಂದೆಯೂ ಮೈತ್ರಿ ಮಾಡಿಕೊಂಡ ಸ್ಥಾನಗಳು ಸುಲಭವಾಗಿ ಪರಿಹರಿಸಿಕೊಳ್ಳಬಹುದು ಆದರೆ ಅಜಿತ್ ಪವಾರ್ ಬಣದ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳು ಬಿಜೆಪಿಗೆ ಸವಾಲಾಗಿ ಪರಿಣಮಿಸಿವೆ. ಈಗಾಗಲೇ ಅಜಿತ್ ಪವಾರ್ ಅವರು ಬಿಜೆಪಿ ಪಾಳಯಕ್ಕೆ ಬಂದಿರುವುದೇ ಕೇಸರಿ ಪಾಳಯದ ಹಿನ್ನಡೆಗೆ ಕಾರಣ ಎಂದು ಹಲವರು ಹೇಳಿಕೊಂಡಿದ್ದಾರೆ. ಅಜಿತ್ ಪವಾರ್ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿರುವ ಬಿಜೆಪಿ ಕಾರ್ಯಕರ್ತರು ಮತ್ತು ಕಳೆದ ಬಾರಿಯ ಸೋತ ಬಿಜೆಪಿ/ ಶಿವಸೇನೆ ಅಭ್ಯರ್ಥಿಗಳ ಮನವೊಲಿಸುವುದೂ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕಳೆದ ಬಾರಿಯೂ ಬಿಜೆಪಿಗೆ ಮೈತ್ರಿಯಲ್ಲಿ ಕಿರಿಕ್
ಕಳೆದ ವಿಧಾನಸಭಾ ಚುನಾವಣೆ ವೇಳೆಯೂ ಬಿಜೆಪಿಗೆ ಮೈತ್ರಿಯಲ್ಲಿ ಸವಾಲು ಎದುರಾಗಿತ್ತು. ಸಿಂಧದುರ್ಗ ಭಾಗದಲ್ಲಿ ಶಿವಸೇನೆ ನಾನಾ ಕಾರಣಕ್ಕಾಗಿ ಪ್ರತ್ಯೇಕ ಸ್ಪರ್ಧೆಯನ್ನೂ ಮಾಡಿತ್ತು. ಚುನಾವಣೆ ನಡೆದ ಕೆಲ ಕಾಲದ ಬಳಿಕ ಉದ್ಧವ್ ಠಾಕ್ರೆ ಮೈತ್ರಿಕೂಟದಿಂದ ದೂರವಾಗಿದ್ದರು. ಈ ಬಾರಿಯೂ ಹಲವು ಲೆಕ್ಕಾಚಾರಗಳನ್ನು ಮಾಡಲಾಗುತ್ತಿದೆ.

ಬಿಜೆಪಿಗೆ ಕಠಿನ ಸವಾಲು
ಒಂದೆಡೆ ಮಿತ್ರಪಕ್ಷಗಳನ್ನು ಸಮಾಧಾನ ಪಡಿಸಿ ಮನವೊಲಿಸಿಕೊಳ್ಳುವುದು, ಇನ್ನೊಂದೆಡೆ ಕಾರ್ಯಕರತರನ್ನು ಉಳಿಸಿಕೊಂಡು ಹೋರಾಟ ಸಂಘಟಿಸುವುದು ಮಾತ್ರವಲ್ಲದೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು ಬಿಜೆಪಿ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಂದೊಮ್ಮೆ ಹೆಚ್ಚಿನ ಸ್ಥಾನಗಳೂ ಗೆದ್ದರೂ ರಾಜಕೀಯ ಸಾರಥ್ಯ ಯಾರಿಗೆ ಎನ್ನುವ ಗೊಂದಲವೂ ಪಕ್ಷದಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರದ ಮತದಾರಲ್ಲಿ ಹೊಕ್ಕಿದೆ. ಇದಕ್ಕೆ ಕಾರಣವಾದ ವಿಚಾರ ಹೆಚ್ಚಿನ ಸ್ಥಾನಗಳೂ ಹೊಂದಿದ್ದರೂ ಶಿವಸೇನೆ ವಿಭಜನೆ ಬಳಿಕ ಏಕನಾಥ್ ಶಿಂಧೆ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿ, ದೇವೇಂದ್ರ ಫಡ್ನವಿಸ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿದ್ದು. ಈ ಲೆಕ್ಕಾಚಾರ ಲೋಕಸಭಾ ಚುನಾವಣೆಯಲ್ಲಿ ಫಲಪ್ರದವಾಗಲಿಲ್ಲ ಎನ್ನುವುದು ಸ್ಪಷ್ಟವಾಯಿತು.

ಆಂತರಿಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿ!

ಆಂತರಿಕ ಭಿನ್ನಾಭಿಪ್ರಾಯಗಳಿಂದಲೇ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆ ಮಾಡದ ರೀತಿಯಲ್ಲಿ ಮೈತ್ರಿಕೂಟಕ್ಕೆ ಹಿನ್ನಡೆಯಾದ ವಿಚಾರ ಬಿಜೆಪಿ ಉನ್ನತ ನಾಯಕತ್ವಕ್ಕೂ ಸ್ಪಷ್ಟವಾಗಿದ್ದು, ಎಲ್ಲ ಭಿನ್ನಾಭಿಪ್ರಾಯಗಳನ್ನು ಬಗೆ ಹರಿಸಿಕೊಂಡು ಕೆಲಸ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.

ಕಾರ್ಯಕರ್ತರು ವಿವಿಧ ದಿಕ್ಕುಗಳಲ್ಲಿ ಕಾರ್ಯನಿರ್ವಹಿಸುವ ಸಂಘಟನೆಯು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಪಕ್ಷದ ಸಭೆಯಲ್ಲೇ ಶಾ ಅವರು ಸಲಹೆ ನೀಡಿರುವುದಾಗಿ ಬಿಜೆಪಿ ಮೂಲಗಳು ಹೇಳಿವೆ.

2019ರಲ್ಲಿ ಮಹಾರಾಷ್ಟ್ರದಲ್ಲಿ ಅವಿಭಜಿತ ಶಿವಸೇನೆಯೊಂದಿಗೆ ಚುನಾವಣ ಪೂರ್ವ ಮೈತ್ರಿ ಮಾಡಿಕೊಂಡು ಬಿಜೆಪಿ ಸ್ಪರ್ಧಿಸಿದ್ದ 164 ವಿಧಾನಸಭಾ ಕ್ಷೇತ್ರಗಳ ಪೈಕಿ 105ರಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. . ಮುಂಬೈನ 36 ವಿಧಾನಸಭಾ ಸ್ಥಾನಗಳ ಪೈಕಿ ಕೇಸರಿ ಪಕ್ಷ 16 ಸ್ಥಾನಗಳನ್ನು ಗೆದ್ದಿತ್ತು. 2024 ರ ಲೋಕಸಭಾ ಚುನಾವಣೆಯಲ್ಲಿ, ಸ್ಪರ್ಧಿಸಿದ 28 ಲೋಕಸಭಾ ಸ್ಥಾನಗಳ ಪೈಕಿ ಕೇವಲ ಒಂಬತ್ತನ್ನು ಮಾತ್ರ ಗೆದ್ದು ಭಾರೀ ಆಘಾತ ಅನುಭವಿಸಿದೆ.

ಸದ್ಯದ ರಾಜಕೀಯ ಪಕ್ಷಗಳ ಬಲಾಬಲ

288 ಸದಸ್ಯ ಬಲದ ಸದನದಲ್ಲಿ ಬಿಜೆಪಿ ಸದ್ಯ ಹೆಚ್ಚಿನ ಶಾಸಕರ ಬಲ ಹೊಂದಿದ್ದು, ಶಿವಸೇನೆ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಮಹಾಯುತಿ (ಎನ್ ಡಿಎ) ಸರಕಾರ ಮುನ್ನಡೆಸುತ್ತಿದೆ. ಬಿಜೆಪಿ 102 ಶಾಸಕರನ್ನು ಹೊಂದಿದ್ದು, ಶಿಂಧೆ ಸೇನೆ 38, ಅಜಿತ್ ಪವಾರ್ ಬಣದ ಎನ್ ಸಿಪಿ 40 ಶಾಸಕರ ಬಲ ಸರ್ಕಾರಕ್ಕಿದೆ. ಮೈತ್ರಿಕೂಟದ ಒಟ್ಟು 202 ಶಾಸಕರ ಭರ್ಜರಿ ಬಹುಮತದೊಂದಿಗೆ ಸರಕಾರ ಮುನ್ನಡೆಸುತ್ತಿದೆ. ಇಷ್ಟು ಬಲವಿದ್ದರೂ ಲೋಕಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ರಣತಂತ್ರದ ಎದುರು ಮೈತ್ರಿಕೂಟ ಹಿನ್ನಡೆ ಅನುಭವಿಸಿತ್ತು.

ವಿಪಕ್ಷ ಮಹಾ ವಿಕಾಸ್ ಅಘಾಡಿಯಲ್ಲಿ ಸದ್ಯ 71 ಶಾಸಕರ ಬಲವಿದೆ. ಕಾಂಗ್ರೆಸ್ 37, ಶಿವಸೇನೆ (ಉದ್ಧವ್ ಠಾಕ್ರೆ ಬಣ) 16, ಶರದ್ ಪವರ್ ಎನ್ ಸಿಪಿ 12 ಶಾಸಕರನ್ನು ಹೊಂದಿದೆ. ಸದ್ಯ 15 ಸ್ಥಾನಗಳು ಖಾಲಿ ಇದ್ದು, ಇಬ್ಬರು ಓವೈಸಿ ಅವರ ಎಐಎಂಐಎಂ ಶಾಸಕರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next