ಬೆಂಗಳೂರು: ಆರ್. ಸ್ಮರಣ್ ಅವರ ಅಜೇಯ ಶತಕದಿಂದಾಗಿ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ರವಿವಾರ ನಡೆದ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಕೂಟದ ಮೊದಲ ಪಂದ್ಯದಲ್ಲಿ ಮೈಸೂರು ವಾರಿಯರ್ ತಂಡವನ್ನು ಮೂರು ವಿಕೆಟ್‌ಗಳಿಂದ ರೋಮಾಂಚಕ ವಾಗಿ ಸೋಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು ವಾರಿಯರ್ ತಂಡವು ನಾಯಕ ಕರುಣ್ ನಾಯರ್, ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಮತ್ತು ಜಗದೀಶ ಸುಚಿತ್ ಅವರ ಉಪಯುಕ್ತ ಆಟದಿಂದಾಗಿ 8 ವಿಕೆಟಿಗೆ 196 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದುಕ್ಕುತ್ತರವಾಗಿ ಆರ್. ಸ್ಮರಣ್ ಅವರ ಏಕಾಂಗಿ ಹೋರಾಟದಿಂದ ಗುಲ್ಬರ್ಗ ತಂಡವು ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಗೆಲುವಿನ ರನ್ (7ಕ್ಕೆ 200) ಹೊಡೆದು ಸಂಭ್ರಮಿಸಿತು. ಅಜೇಯ ಶತಕ ಬಾರಿಸಿದ ಸ್ಮರಣ್ 60 ಎಸೆತಗಳಿಂದ 104 ರನ್ ಹೊಡೆದು ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು. 11 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿ ಸಂಭ್ರಮಿಸಿದರು.
ಮೈಸೂರಿನ ಆರಂಭ ಶೋಚನೀಯ ವಾಗಿತ್ತು. 18 ರನ್ ಗಳಿಸುವಷ್ಟರಲ್ಲಿ ತಂಡ ಎರಡು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಆಬಳಿಕ ನಾಯಕ ಕರುಣ್ ಮತ್ತು ದ್ರಾವಿಡ್ ಪುತ್ರ ಸಮಿತ್ ಜವಾಬ್ದಾರಿಯಿಂದ ಆಡಿ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ಮೂರನೇ ವಿಕೆಟಿಗೆ 83 ರನ್ನುಗಳ ಜತೆಯಾಟ ನಡೆಸಿ ಕುಸಿದ ತಂಡವನ್ನು ಮೇಲಕ್ಕೆತ್ತಿದರು. ಉತ್ತಮವಾಗಿ ಆಡು ತ್ತಿದ್ದ ಸಮಿತ್ 33 ರನ್ನಿಗೆ ಔಟಾದರು. ಕರುಣ್ 35 ಎಸೆತಗಳಿಂದ 66 ರನ್ ಹೊಡೆದರು. ಕೊನೆ ಹಂತದಲ್ಲಿ ಸ್ಫೋಟಕ ವಾಗಿ ಆಡಿದ ಜಗದೀಶ ಸುಚಿತ್ ಕೇವಲ 13 ಎಸೆತಗಳಲ್ಲಿ 40 ರನ್ ಹೊಡೆದರು. 2 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದರು.
ಸಂಕ್ಷಿಪ್ತ ಸ್ಕೋರು: ಮೈಸೂರು ವಾರಿಯರ್: 8 ವಿಕೆಟಿಗೆ 196 (ಕರುಣ್ ನಾಯರ್ 66, ಸಮಿತ್ ದ್ರಾವಿಡ್ 33, ಜಗದೀಶ ಸುಚಿತ್ 40, ಮೊನಿಷ್ ರೆಡ್ಡಿ 25ಕ್ಕೆ 2, ಪೃಥ್ವಿರಾಜ್ ಶೇಖಾವತ್ 28ಕ್ಕೆ 2, ಯಶೋವರ್ಧನ್ ಪಿ. 31ಕ್ಕೆ 2); ಗುಲ್ಬರ್ಗ ಮಿಸ್ಟಿಕ್ಸ್: 7 ವಿಕೆಟಿಗೆ 200 (ಆರ್. ಸ್ಮರಣ್ 104 ಔಟಾಗದೆ, ಪ್ರವೀಣ್ ದುಬೆ 37, ವಿದ್ಯಾಧರ್ ಪಾಟೀಲ್ 42ಕ್ಕೆ 2, ಮನೋಜ್ ಭಾಂಡಗೆ 40ಕ್ಕೆ 2). ಆರ್. ಸ್ಮರಣ್ ಪಂದ್ಯಶ್ರೇಷ್ಠ.
ಅಂತಿಮ ಓವರ್ ಹೋರಾಟ
ಗುಲ್ಬರ್ಗ ಗೆಲ್ಲಲು ಅಂತಿಮ ಓವರಿನಲ್ಲಿ 10 ರನ್ ಗಳಿಸಬೇಕಿತ್ತು. ಮನೋಜ್ ಭಾಂಡಗೆ ಎಸೆದ ಈ ಓವರಿನ ಮೊದಲ ನಾಲ್ಕು ಎಸೆತಗಳಲ್ಲಿ (2+1+2+4) ಗುಲ್ಬರ್ಗ ಒಟ್ಟಾರೆ 9 ರನ್ ಗಳಿಸಿದ್ದರಿಂದ ಮೊತ್ತ ಸಮಬಲಗೊಂಡಿತು. ಐದನೇ ಎಸೆತದಲ್ಲಿ ಗುಲ್ಬರ್ಗದ ಆಟಗಾರ ರಿತೇಶ್ ಭಟ್ಕಳ ರನೌಟಾದರು. ಇದರಿಂದ ಅಂತಿಮ ಎಸೆತ ಎದುರಿಸುವ ಅವಕಾಶ ಪಡೆದ ಶತಕವೀರ ಸ್ಮರಣ್ ಮತ್ತೆ ಬೌಂಡರಿ ಬಾರಿಸಿ ತಂಡಕ್ಕೆ ರೋಮಾಂಚಕ ಜಯ ತಂದುಕೊಟ್ಟರು.