ಕಲಬುರಗಿ: ಮೈಸೂರಿನ ಮಹಾರಾಜರು ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮರಣಾರ್ಥ ಕರ್ನಾಟಕ ರಾಜ್ಯ, ಕ್ರಿಕೆಟ್ ಸಂಸ್ಥೆಯು ಪ್ರತಿಷ್ಠಿತ ಟಿ 20- ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿದೆ. ಟೂರ್ನಿಯು ಆಗಸ್ಟ್ 7 ರಂದು ಆರಂಭಗೊಂಡು ಆ22 ರವರೆಗೆ ನಡೆಯಲಿದೆ.
ಈ ವಿಷಯ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಗೌರವ ಉಪಾಧ್ಯಕ್ಷ ಜಿ. ಅಭಿರಾಮ್ ಪ್ರಕಟಿಸಿದರು. ಯುವ ಕ್ರಿಕೆಟಿಗರಿಗೆ ತಮ್ಮ ಪ್ರತಿಭೆಯನ್ನು ಪ್ರಕಟಿಸಲು ಅವಕಾಶ ನೀಡುವಲ್ಲಿ ಕೆಎಸ್‌ಸಿಎ ಯಾವಾಗಲೂ ಮೊದಲ ಆದ್ಯತೆ ನೀಡುತ್ತದೆ, ಮಹಾರಾಜ ಟ್ರೋಫಿ ಕೆಎಸ್ ಸಿಎ ಯಲ್ಲಿ ಶಿವಮೊಗ್ಗ ಜಿಲ್ಲೆಯು ತನ್ನದೇ ಆದ ತಂಡವನ್ನು ಹೊಂದಲಿದೆ ಎಂಬುದನ್ನು ಪುಕಟಿಸಲು ನನಗೆ ಅತೀವ ಸಂತಸವಾಗುತ್ತದೆ. ಈ ಮೂಲಕ ಈ ವಲಯದ ಆಟಗಾರರಿಗೆ ನೇರಪ್ರಸಾರ ಗೊಳ್ಳುವ ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದಂತಾಗಿದೆ ಎಂದರು.
ಟೂರ್ನಿಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ರ, ರಾಯಚೂರು ಮತ್ತು ಮಂಗಳೂರು ಸೇರಿದಂತೆ ಒಟ್ಟು ಆರು ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ ಹೋರಾಟ ನಡೆಸಲಿವೆ, ಮಹಾರಾಜ ಟೂರ್ನಿಯು ಆ.7 ರಂದು ಮೈಸೂರಿನಲ್ಲಿ ಆರಂಭಗೊಳ್ಳಲಿದೆ. ಮೊದಲ ಹಂತದ ಪಂದ್ಯಗಳು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಂಗಣದಲ್ಲಿ ನಡೆಯಲಿದೆ. ಮೈಸೂರಿನಲ್ಲಿ ಒಟ್ಟು 16 ಪಂದ್ಯಗಳು ನಡೆಯಲಿದ್ದು, ಇತರೆ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದರು.
ಇದೇ ವೇಳೆ ಕಲ್ಬುರ್ಗಿಯವರೇ ಆದ ಮೊಹಮ್ಮದ್ ಅಲಿ ಅಲ್ ಹುಸೇನ್ ಅವರ “ಗುಲ್ಬರ್ಗ ಮೈಸ್ಟಿಕ್” ತಂಡವನ್ನು ಕೂಡ ಘೋಷಣೆ ಮಾಡಲಾಯಿತು. ತಂಡದ ಲೋಗೋ ವನ್ನು ಕೂಡ ಅಭಿರಾಮ್ ಬಿಡುಗಡೆ ಮಾಡಿದರು.
ಪಂದ್ಯಾವಳಿಯಲ್ಲಿ ಆಯಾ ತಂಡದ ಪರ ಇಬ್ಬರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಕ್ರೀಡಾಪಟುಗಳು, ಉಳಿದಂತೆ ರಾಜ್ಯ ರಣಜಿ ಹಾಗೂ ಇತರೆ ತಂಡಗಳಿಗೆ ಆಡಿದ 6 ಯಶಸ್ವಿ ಮತ್ತು ಅತ್ಯುತ್ತಮ ಆಟಗಾರರು ಕೂಡ ಆಡಲಿದ್ದಾರೆ.