Advertisement

Maharaja Trophy; ಹುಬ್ಬಳ್ಳಿ ಹ್ಯಾಟ್ರಿಕ್‌ : ಬೆಂಗಳೂರಿಗೆ ಮೊದಲ ಆಘಾತ

12:10 AM Aug 20, 2024 | Team Udayavani |

ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಹುಬ್ಬಳ್ಳಿ ಟೈಗರ್ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿದೆ. ಸೋಮವಾರದ ಮೊದಲ ಮುಖಾಮುಖಿಯಲ್ಲಿ ಅದು ಬೆಂಗಳೂರು ಬ್ಲಾಸ್ಟರ್ಗೆ 5 ವಿಕೆಟ್‌ಗಳ ಸೋಲುಣಿಸಿತು. ಇದು ಬೆಂಗಳೂರು ತಂಡಕ್ಕೆ 4 ಪಂದ್ಯಗಳಲ್ಲಿ ಎದುರಾದ ಮೊದಲ ಆಘಾತ.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಳೂರು ಬ್ಲಾಸ್ಟರ್ 19.5 ಓವರ್‌ಗಳಲ್ಲಿ 142 ರನ್ನಿಗೆ ಆಲೌಟ್‌ ಆಯಿತು. ಜವಾಬಿತ್ತ ಹುಬ್ಬಳ್ಳಿ ಟೈಗರ್ 18.5 ಓವರ್‌ಗಳಲ್ಲಿ 5 ವಿಕೆಟಿಗೆ 144 ರನ್‌ ಬಾರಿಸಿತು. ಇದರೊಂದಿಗೆ ಮೂರೂ ಪಂದ್ಯ ಗೆದ್ದ ಮನೀಷ್‌ ಪಾಂಡೆ ನೇತೃತ್ವದ ಹುಬ್ಬಳ್ಳಿ ಅಜೇಯ ಅಭಿಯಾನ ಮುಂದುವರಿಸಿತು.ಎರಡೂ ತಂಡಗಳು 6 ಅಂಕ ಹೊಂದಿವೆ. ಆದರೆ ರನ್‌ರೇಟ್‌ನಲ್ಲಿ ಮುಂದಿರುವ ಬೆಂಗಳೂರು ಅಗ್ರಸ್ಥಾನದಲ್ಲಿದೆ.

ಬೆಂಗಳೂರು ಸರದಿಯಲ್ಲಿ ಮಿಂಚಿದ್ದು ಇಬ್ಬರು ಮಾತ್ರ. ಆರಂಭಕಾರ ಎಲ್‌.ಆರ್‌. ಚೇತನ್‌ (48) ಮತ್ತು ಶುಭಾಂಗ್‌ ಹೆಗ್ಡೆ (ಅಜೇಯ 52). ಕ್ರಾಂತಿ ಕುಮಾರ್‌ 14 ರನ್‌ ಮಾಡಿದರು. ಉಳಿದವರ್ಯಾರೂ ಎರಡಂಕೆಯ ಗಡಿ ತಲುಪಲಿಲ್ಲ. ವಿದ್ವತ್‌ ಕಾವೇರಪ್ಪ (23ಕ್ಕೆ 3) ಮತ್ತು ಮನ್ವಂತ್‌ ಕುಮಾರ್‌ (38ಕ್ಕೆ 3) ಘಾತಕ ಬೌಲಿಂಗ್‌ ದಾಳಿ ನಡೆಸಿ ಬೆಂಗಳೂರಿಗೆ ಕಡಿವಾಣ ಹಾಕಿದರು.

ಹುಬ್ಬಳ್ಳಿಯ ಚೇಸಿಂಗ್‌ ಅಮೋಘವಾಗಿತ್ತು. ಮೊಹಮ್ಮದ್‌ ತಾಹಾ ಹತ್ತೇ ರನ್ನಿಗೆ ಔಟಾದರೂ ತಿಪ್ಪಾ ರೆಡ್ಡಿ (47) ಮತ್ತು ಕೀಪರ್‌ ಕೃಷ್ಣನ್‌ ಶ್ರೀಜಿತ್‌ (41) 81 ರನ್‌ ಜತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಬೆಂಗಳೂರು ಪರ ಕ್ರಾಂತಿ ಕುಮಾರ್‌ 29ಕ್ಕೆ 3 ವಿಕೆಟ್‌ ಉರುಳಿಸಿದರು. ವಿದ್ವತ್‌ ಕಾವೇರಪ್ಪ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

Advertisement

ಕರುಣ್‌ ನಾಯರ್‌ ಶತಕ
ಮಂಗಳೂರು ಡ್ರ್ಯಾಗನ್ಸ್‌ ಎದುರಿನ ಇನ್ನೊಂದು ಪಂದ್ಯದಲ್ಲಿ ಮೈಸೂರು ವಾರಿಯರ್ ನಾಯಕ ಕರುಣ್‌ ನಾಯರ್‌ ಸ್ಫೋಟಕ ಶತಕದ ಮೂಲಕ ಅಬ್ಬರಿಸಿದರು. ನಾಯರ್‌ ಕೇವಲ 48 ಎಸೆತಗಳಿಂದ 124 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಸಿಡಿಸಿದ್ದು 13 ಬೌಂಡರಿ ಹಾಗೂ 9 ಸಿಕ್ಸರ್‌. ಮೈಸೂರು ವಾರಿಯರ್ 4ಕ್ಕೆ 226 ರನ್‌ ಬಾರಿಸಿ ಸವಾಲೊಡ್ಡಿದೆ.

ಸಂಕ್ಷಿಪ್ತ ಸ್ಕೋರ್‌: ಬೆಂಗಳೂರು-19.5 ಓವರ್‌ಗಳಲ್ಲಿ 142 (ಶುಭಾಂಗ್‌ ಹೆಗ್ಡೆ ಔಟಾಗದೆ 52, ಎಲ್‌.ಆರ್‌. ಚೇತನ್‌ 48, ವಿದ್ವತ್‌ ಕಾವೇರಪ್ಪ 23ಕ್ಕೆ 3, ಮನ್ವಂತ್‌ ಕುಮಾರ್‌ 38ಕ್ಕೆ 3). ಹುಬ್ಬಳ್ಳಿ-18.5 ಓವರ್‌ಗಳಲ್ಲಿ 5 ವಿಕೆಟಿಗೆ 144 (ತಿಪ್ಪಾ ರೆಡ್ಡಿ 47, ಕೃಷ್ಣನ್‌ ಶ್ರೀಜಿತ್‌ 41, ಕ್ರಾಂತಿ ಕುಮಾರ್‌ 29ಕ್ಕೆ 3). ಪಂದ್ಯಶ್ರೇಷ್ಠ: ವಿದ್ವತ್‌ ಕಾವೇರಪ್ಪ.

 

 

Advertisement

Udayavani is now on Telegram. Click here to join our channel and stay updated with the latest news.

Next