ಬೆಂಗಳೂರು: ಮಹಾರಾಜ ಟ್ರೊಫಿ ಟಿ20 ಪಂದ್ಯಾವಳಿಯಲ್ಲಿ 5ನೇ ಗೆಲುವು ದಾಖಲಿಸಿಸುವ ಮೂಲಕ ಬೆಂಗಳೂರು ಬ್ಲಾಸ್ಟರ್ ತಂಡ ಮತ್ತೆ ಅಗ್ರಸ್ಥಾನಕ್ಕೆ ಜಿಗಿದಿದೆ. ರವಿವಾರ ನಡೆದ ಪಂದ್ಯದಲ್ಲಿ ಅದು ಮೈಸೂರು ವಾರಿಯರ್ ವಿರುದ್ಧ 56 ರನ್‌ಗಳ ಭರ್ಜರಿ ಜಯ ಸಾಧಿಸಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಳೂರು 7 ವಿಕೆಟಿಗೆ 189 ರನ್ ರಾಶಿ ಹಾಕಿದರೆ, ಮೈಸೂರು 17.5 ಓವರ್‌ಗಳಲ್ಲಿ 133ಕ್ಕೆ ಕುಸಿಯಿತು.
ಬೆಂಗಳೂರು ಬೇಗನೆ 2 ವಿಕೆಟ್ ಕಳೆದುಕೊಂಡಿತಾದರೂ ಬಳಿಕ ಚೇತರಿಸಿಕೊಂಡು ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಆರಂಭಕಾರ ಎಲ್.ಆರ್. ಚೇತನ್ 18ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು 88 ರನ್ ಬಾರಿಸಿದರು (53 ಎಸೆತ, 9 ಬೌಂಡರಿ, 5 ಸಿಕ್ಸರ್). ಸೂರಜ್ ಅಹುಜ 32, ಎಸ್. ರಕ್ಷಿತ್ 29 ರನ್ ಮಾಡಿದರು.
ಮೈಸೂರು ತಂಡ ತೀವ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಎಸ್.ಯು. ಕಾರ್ತಿಕ್ 26, ಹರ್ಷಿಲ್ ಧರ್ಮಾಣಿ 20 ರನ್ ಮಾಡಿದ್ದೇ ಗಮನಾರ್ಹ ಗಳಿಕೆ. ಉಳಿದವರ್ಯಾರೂ ಯಶಸ್ಸು ಕಾಣಲಿಲ್ಲ. ಶುಭಾಂಗ್ ಹೆಗ್ಡೆ ಮತ್ತು ಕ್ರಾಂತಿ ಕುಮಾರ್ ತಲಾ 3 ವಿಕೆಟ್ ಉರುಳಿಸಿ ಮೈಸೂರು ತಂಡವನ್ನು ಕಾಡಿದರು.
ಶಿವಮೊಗ್ಗಕ್ಕೆ ಮೊದಲ ಜಯ
ಶನಿವಾರ ರಾತ್ರಿ ಹುಬ್ಬಳ್ಳಿ ಟೈಗರ್ ತಂಡವನ್ನು 6 ವಿಕೆಟ್‌ಗಳಿಂದ ಪರಾಭವಗೊಳಿಸಿದ ಶಿವಮೊಗ್ಗ ಲಯನ್ಸ್ ತನ್ನ ಮೊದಲ ಗೆಲುವು ಸಾಧಿಸಿತು. ಹುಬ್ಬಳ್ಳಿ 19.3 ಓವರ್‌ಗಳಲ್ಲಿ 141ಕ್ಕೆ ಆಲೌಟಾದರೆ, ಶಿವಮೊಗ್ಗ 15.1 ಓವರ್‌ಗಳಲ್ಲಿ 4 ವಿಕೆಟಿಗೆ 147 ರನ್ ಮಾಡಿತು. ಚೇಸಿಂಗ್ ವೇಳೆ ಅಭಿನವ್ ಮನೋಹರ್ 70 ರನ್ ಬಾರಿಸಿದರು.